ಚಂದ್ರವಳ್ಳಿ ನ್ಯೂಸ್, ತುಮಕೂರು:
ಹಿರೇಹಳ್ಳಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಪ್ರಾಯೋಗಿಕ ಕೇಂದ್ರದಲ್ಲಿ ಭಾನುವಾರ ‘ಜೈವಿಕ ವೈವಿಧ್ಯತೆ ಜೋಡಿಸುವ ಮೂಲಕ ಹಣ್ಣಿನ ಬೆಳೆಗಳಲ್ಲಿ ರೈತರ ಪ್ರಭೇದಗಳ ಸಂರಕ್ಷಣೆ’ ಕುರಿತು ಕಾರ್ಯಾಗಾರ ನಡೆಯಿತು.
ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಟಿ.ಕೆ.ಬೆಹೆರಾ, ರೈತರು ತೋಟಗಾರಿಕಾ ಬೆಳೆಗಳ ಬಗ್ಗೆ ಆಸಕ್ತಿ ತೋರಬೇಕು. ವಿಜ್ಞಾನ ಕೇಂದ್ರದ ತಜ್ಞರ ಮಾರ್ಗದರ್ಶನ ಪಡೆಯಬೇಕು. ಸರಿಯಾದ ರೀತಿಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರೆ ಉತ್ತಮ ಲಾಭ ಸಿಗುತ್ತದೆ ಎಂದರು.
ಪಿಪಿವಿ, ಎಫ್‌ಆರ್‌ಎ ಅಧ್ಯಕ್ಷ ಡಾ.ಟಿ.ಮೊಹಾಪಾತ್ರ, ‘ಇದೊಂದು ವಿಶೇಷ ಕಾರ್ಯಾಗಾರ. ಇದುವರೆಗೆ ಏಳು ಬಾರಿ ಹಿರೇಹಳ್ಳಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದೇನೆ. ಪ್ರತಿ ಬಾರಿ ಹೊಸದು ಕಲಿಯಲು ಅವಕಾಶ ಸಿಕ್ಕಿದೆ. ನಿರಂತರ ಪ್ರಯತ್ನದಿಂದ ಕಾರ್ಯಾಗಾರ ಯಶಸ್ವಿಯಾಗಿದೆ. ಆಯೋಜಕರಿಗೆ ಅಭಿನಂದನೆ ಸಲ್ಲಿಸಲಾಗುವುದು’ ಎಂದರು.
ಕೃಷಿಯ ಕುರಿತು ಸಾಮಾನ್ಯ ಜ್ಞಾನ ಎಲ್ಲರಲ್ಲಿ ಇರಬೇಕು. ಸರಸ್ವತಿ ಇದ್ದರೆ ಲಕ್ಷ್ಮಿ ತಾನಾಗಿಯೇ ಒಲಿಯುತ್ತಾಳೆ. ವಿಜ್ಞಾನ ಕೇಂದ್ರಗಳಲ್ಲಿ ರೈತರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತವೆ. ರೈತರು ಸರಿಯಾದ ಬೆಳೆಗೆ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂದು ತಿಳಿಸಿದರು.
ಎಫ್ಆರ್ ಎ ರಿಜಿಸ್ಟ್ರಾರ್ ಜನರಲ್ ಡಿ.ಕೆ.ಅಗರ್ವಾಲ್, ಹಲವು ಬಗೆಯ ಹಣ್ಣುಗಳು ಇದೆ ಮೊದಲ ಬಾರಿಗೆ ನೋಡಲು ಅವಕಾಶ ದೊರೆಯಿತು. ಕಾರ್ಯಾಗಾರ ರೈತರಿಗೆ ತುಂಬಾ ನೆರವಾಗಲಿದೆ. ಕೃಷಿ ಕಾರ್ಯದಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಸಹಾಯಕವಾಗುತ್ತದೆ. ಹೊಸ ತಳಿಯ ಹಣ್ಣುಗಳ ಬಗ್ಗೆ ಆಸಕ್ತಿ ಮೂಡಿಸುತ್ತದೆ ಎಂದರು.
ಹಿರೇಹಳ್ಳಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಪ್ರಾಯೋಗಿಕ ಕೇಂದ್ರದ ಮುಖ್ಯಸ್ಥ ಜಿ.ಕರುಣಾಕರನ್ ಇತರರು ಹಾಜರಿದ್ದರು.