ಸಸ್ಯ ತಳಿಗಳ ಸಂರಕ್ಷಣೆ ಹಾಗೂ ರೈತರ ಹಕ್ಕು ಕಾಯ್ದೆ ತರಬೇತಿ ಶಿಬಿರ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿ ಹಾಡೋನಹಳ್ಳಿಯ ಭಾ.ಕೃ.ಸಂ.ಪ – ಕೃಷಿ ವಿಜ್ಞಾನ ಕೇಂದ್ರದಲ್ಲಿ  ‘ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ತರಬೇತಿ ಮತ್ತು ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

 ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ನಿರಂಜನ ಮೂರ್ತಿರವರು ಉದ್ಘಾಟನೆಯನ್ನು ನೆರವೇರಿಸಿ  ಅವರು ಮಾತನಾಡಿ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತ ಹಕ್ಕುಗಳ ಕಾಯ್ದೆಯ ಮಹತ್ವದ ಬಗ್ಗೆ ತಿಳಿಸಿದರು.

ನಂತರ  ಮೈಸೂರಿನ ಸಹಜ ಸಮೃದ್ಧಿ ಸಂಸ್ಥೆಯ ಯೋಜನಾ ಸಂಯೋಜಕ  ವಿಶ್ವನಾಥ ಮಾತನಾಡಿ ಮನುಷ್ಯನ ಆರೋಗ್ಯ ನಿರ್ವಹಣೆಯಲ್ಲಿ ಸ್ಥಳೀಯ ತಳಿಗಳ ಕೊಡುಗೆ ಹಾಗೂ ಸಹಜ ಸಮೃದ್ಧಿ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. 

ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ.ಜಿ. ಹನುಮಂತರಾಯ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ರೈತರು ಸ್ಥಳೀಯ ಸಸ್ಯ ತಳಿಗಳನ್ನು ಸಂರಕ್ಷಣೆಯ ಬಗ್ಗೆ ತಿಳಿಸಿ, ಮುಂದಿನ ಪೀಳಿಗೆಗೆ ಇವುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆಯೆಂದು ತಿಳಿಸಿದರು.

 ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವಸ್ತುಪ್ರದರ್ಶನದಲ್ಲಿ ತೂಬಗೆರೆ ಹೋಬಳಿಯ ಹಲಸು ಬೆಳೆಗಾರರ ಸಂಘದವರ ವಿವಿಧ ಹಲಸು ತಳಿಗಳಾದ ಚಂದ್ರ ಹಲಸು, ಶಿವರಾತ್ರಿ ಹಲಸು, ಏಕಾದಶಿ ಹಲಸು, ಸೂರ್ಯ ಹಲಸು, ಸುವರ್ಣ ಹಲಸು, ರುದ್ದರಾಶಿ ಹಲಸು, ಕೆಂಪು ರುದ್ರಾಕ್ಷಿ ಹಲಸು, ಅಶೋಕ್ ರೆಡ್, ತೂಬಗೆರೆ ಹಲಸು; ಮುಳುಬಾಗಿಲಿನ ಅಕ್ಕಡಿ ಪ್ರಭಾಕರ ರವರು ವಿವಿಧ ರೀತಿಯ ಸಿರಿಧಾನ್ಯಗಳ ತಳಿಗಳಾದ ಹಾಲು ಸಾಮೆ, ಕರಿ ಸಾಮೆ, ಹರ ಸಾಮೆ, ಬಿಳಿ ನವಣೆ, ಕೆಂಪು ನವಣೆ, ಕೀರು ನವಣೆ, 70 ದಿನದ ನವಣೆ, ಕೃಷ್ಣದೇವರಾಯ ನವಣೆ, ಉರುವಲು ನವಣೆ, ಹುಲ್ಲು ನವಣೆ, ಬಿಳಿ ಬರಗು, ಕರಿ ಬರುಗು, ಕರಿ ಗಿಡ್ಡ ರಾಗಿ, ಎಂ.ಆರ್-6 ರಾಗಿ, ಆರು ತಿಂಗಳ ಹಾರಕ, ಮೂರು ತಿಂಗಳ ಹಾರಕ, ಐದು ರೀತಿಯ ಬೆಂಡೆ ಬೀಜಗಳು, ವಿವಿಧ ರೀತಿಯ ಸೊಪ್ಪಿನ ಬೀಜಗಳು:

ನೈಸರ್ಗಿಕ ಕೃಷಿಕರಾದ ಶ್ರೀ ಎಂ.ಸಿ ರಾಜಣ್ಣರವರು ತಾವು ಸಂರಕ್ಷಿಸಿದ ಸುಮಾರು 50 ಕ್ಕೂ ಹೆಚ್ಚು ಸಸ್ಯ ತಳಿಗಳನ್ನು ಪ್ರದರ್ಶಿಸಿದ್ದರು. ಕನಕಪುರ ತಾಲ್ಲೂಕಿನ ರಾಜಮ್ಮನವರು ಐದು ರೀತಿಯ ಸೋರೆಕಾಯಿ ತಳಿಗಳು. ಆರು ರೀತಿಯ ಹರಳು ಬೀಜದ ತಳಿಗಳು, ಮೂರು ರೀತಿಯ ಅವರೆ ತಳಿಗಳು, ದಂಟು ಸೊಪ್ಪಿನ ತಳಿಗಳು, ಇತರೆ ಸೊಪ್ಪಿನ ತಳಿಗಳೂ ಸೇರಿ ಸುಮಾರು 22 ರೀತಿ ಸ್ಥಳೀಯ ತಳಿಗಳನ್ನು ಸಂರಕ್ಷಿಸಿ ಪ್ರದರ್ಶನದಲ್ಲಿ ಇಟ್ಟಿದ್ದರು. ಕನಕಪುರ ತಾಲ್ಲೂಕಿನ ಶ್ರೀಮತಿ ಪಾಪಮ್ಮನವರು ವಿವಿಧ ರೀತಿಯ ಸಿರಿಧಾನ್ಯಗಳು, ಧಾನ್ಯಗಳು, ತರಕಾರಿ ಹಾಗೂ ಹಣ್ಣಿನ ಗಿಡದ ಬೀಜಗಳನ್ನು ಪ್ರದರ್ಶನದಲ್ಲಿ ಇಟ್ಟಿದ್ದರು. ರಾಮನಗರ ಜಿಲ್ಲೆಯ ತಮ್ಮಯ್ಯ ರವರು ನಾಟಿ ಆರಿಶಿಣದ ತಳಿಗಳು, ರಾಗಿ ತಳಿಗಳು (ಕರಿ ಗಿಡ್ಡ, ಶರಾವತಿ), ಆವರೆ ತಳಿಗಳು, ಗೆಣಸು ಮತ್ತೂ ಆಲೂಗಡ್ಡೆ ತಳಿಗಳು ಹಾಗೂ ಇತರೆ ತರಕಾರಿ ತಳಿಗಳನ್ನು ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ತಳಿಗಳನ್ನು ಪ್ರದರ್ಶನಕ್ಕೆಇಟ್ಟಿದ್ದರು. ಮೈತ್ರಿ ಸೇವಾ ಸಂಸ್ಥೆಯ ವತಿಯಿಂದ 13 ರೀತಿಯ ಸಂರಕ್ಷಿತ ತಳಿಗಳನ್ನು ಪ್ರದರ್ಶಿಸಿದ್ದರು. ಮೈಸೂರಿನ ಸಹಜ ಸಮೃದ್ದ ಸಂಸ್ಥೆಯಿಂದ ಹತ್ತು ರೀತಿಯ ಭತ್ತದ ತಳಿಗಳು, 30 ವೈವಿಧ್ಯತೆಯ ಸ್ಥಳೀಯ ಸೊಪ್ಪು ಹಾಗೂ ತರಕಾರಿಗಳು,

15 ರೀತಿಯ ಸಿರಿಧಾನ್ಯಗಳ ತಳಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಒಟ್ಟಾರೆ ವಸ್ತುಪ್ರದರ್ಶನದಲ್ಲಿ ಸುಮಾರು 340 ಕ್ಕೂ ಹೆಚ್ಚು ಸ್ಥಳೀಯ ಹಾಗೂ ಸಂರಕ್ಷಿತ ತಳಿಗಳನ್ನು ಪ್ರದರ್ಶಿಸಿ, ಮಾರಾಟಕ್ಕೂ ಅನುವು ಮಾಡಿಕೊಡಲಾಗಿತ್ತು. ಕೃಷಿ ವಿಜ್ಞಾನ ಕೇಂದ್ರ ದಿನದ ಆಚರಣೆಯನ್ನು ಸಹ ಆಯೋಜಿಸಲಾಗಿತ್ತು. 

ಈ ಕಾರ್ಯಕ್ರಮದಲ್ಲಿ ರಾಮನಗರ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಲತಾ ಕುಲಕರ್ಣಿ ರವರು; ಕೇಂದ್ರದ ವಿಜ್ಞಾನಿಗಳಾದ ಡಾ. ಜೆ. ವೆಂಕಟೇ ಗೌಡ, ಡಾ. ಪಿ. ವೀರನಾಗಪ್ಪ, ಡಾ.ವೈ.ಎಂ. ಗೋಪಾಲ್, ಶ್ರೀಮತಿ ಮೇಘನಾ ಎಸ್.ವಿ ರವರು ಭಾಗವಹಿಸಿದ್ದರು.

 ಕಾರ್ಯಕ್ರಮದಲ್ಲಿ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದ ರೈತ / ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಿಂದ 200 ಕ್ಕೂ ಹೆಚ್ಚು ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು.

 

Share This Article
error: Content is protected !!
";