ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾರತವನ್ನು ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಮತ್ತು ಸ್ವಾತಂತ್ರ್ಯ-ಸಮಾನತೆಗಳಿಗೆ ಬದ್ಧರಾಗಿದ್ದೇವೆ‘ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ಸಂವಿಧಾನ ದಿನಾಚರಣೆ ಅಂಗವಾಗಿ ತಾಲ್ಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಮತ್ತು ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿ
1949ರ ನವೆಂಬರ್ 26ರಂದು ಸಂವಿಧಾನ ರೂಪುಗೊಂಡು, 1950ರ ಜನವರಿ 26ರಂದು ಜಾರಿಗೆ ಬಂದಿತು. ಈ ದಿನವನ್ನು ಭಾರತ ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು, ಸಂವಿಧಾನ ಸಭೆಯು ಸಂವಿಧಾನವನ್ನು ಅಂಗೀಕರಿಸಿತು, ಆದರೆ ಅದು ಜನವರಿ 26, 1950ರಂದು ಗಣರಾಜ್ಯೋತ್ಸವದ ದಿನದಂದು ಜಾರಿಗೆ ತರಲಾಯಿತು.
ಸಂವಿಧಾನ ದಿನ: 2015ರಿಂದ, ನವೆಂಬರ್ 26 ಅನ್ನು ಭಾರತದಲ್ಲಿ ಸಂವಿಧಾನ ದಿನ ಅಥವಾ ‘ಸಂವಿಧಾನ ದಿವಸ್‘ ಎಂದು ಆಚರಿಸಲಾಗುತ್ತದೆ. ಇದು ಸಂವಿಧಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಮಾಡಲಾದ ಘೋಷಣೆಯಾಗಿದೆ ಎಂದು ಹೇಳಿದರು.
ನಂತರ ಉಪನ್ಯಾಸಕ ಎನ್. ಮಹೇಶ್ ಮಾತನಾಡಿ, ‘ಸ್ವಾತಂತ್ರ್ಯ ಪೂರ್ವದಲ್ಲೇ ದೇಶಕ್ಕೆ ಸ್ವತಂತ್ರ ಸಂವಿಧಾನ ಅಗತ್ಯ ಎಂಬ ಒತ್ತಾಯ ಇತ್ತು. 1949ರ ನವೆಂಬರ್ 26ರಂದು ಸಂವಿಧಾನ ರೂಪುಗೊಂಡು, 1950ರ ಜನವರಿ 26ರಂದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂತು. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದವರು ಡಾ.ಬಾಬು ರಾಜೇಂದ್ರ ಪ್ರಸಾದ್. ಕರಡು ಸಮಿತಿ ಅಧ್ಯಕ್ಷ ಡಾ. ಬಿ.ಆರ್. ಅಂಬೇಡ್ಕರ್ ಫ್ರಾನ್ಸ್, ಸೋವಿಯತ್ ಒಕ್ಕೂಟ, ಐರ್ಲೆಂಡ್, ಜಪಾನ್ ಮೊದಲಾದ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಜಗತ್ತಿನ ಅತಿ ಉದ್ದವಾದ ಸಂವಿಧಾನವನ್ನು ರೂಪಿಸಿದರು. ಇದು 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್‌ಗಳು ಹಾಗೂ 98 ತಿದ್ದುಪಡಿಗಳನ್ನು ಒಳಗೊಂಡಿದೆ‘ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರ ಕೆ.ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್. ರವಿಕುಮಾರ್, ಪೌರಾಯುಕ್ತ ಕಾರ್ತಿಕೇಶ್ವರ, ಕಲಾವಿದ ಅಶ್ವಿನ್ ಶರ್ಮ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಗೋವಿಂದರಾಜು, ತಹಶೀಲ್ದಾರ್ ಡಾ. ಮಲ್ಲಪ್ಪ ಕೆ.ಯರಗೋಳ, ಶಂಕರಯ್ಯ ಟಿ.ಎಸ್., ತಾ.ಪಂ. ಇಒ ಮಂಜುನಾಥ ಅರ್ತಿ, ಡಿವೈಎಸ್ಪಿ ಪಾಂಡುರಂಗ ಎಸ್., ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಎನ್. ಶೇಷಾದ್ರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘಟನೆಗಳ ಮುಖಂಡರು ಮತ್ತು ಶಾಲಾಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು.

