ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂವಿಧಾನವೇ ನಮ್ಮ ತಂದೆ ತಾಯಿ, ಸಂವಿಧಾನವೇ ನಮ್ಮ ಬಂಧು ಬಳಗ ಎಂದು ತಿಳಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆತ್ಮ ನೀಡಿದ ಪರಮಾತ್ಮನಿಗೆ ಇಂದು ಗೌರವ ಸಲ್ಲಿಸುವ ಭಾಗ್ಯ ನಮ್ಮದು. ನಾವು ಅಂಬೇಡ್ಕರ್ ಅವರ ಪ್ರತಿಮೆಗೆ ಪೂಜೆ ಮಾಡುತ್ತಿಲ್ಲ, ಅವರ ಪ್ರತಿಭೆಗೆ ಗೌರವ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಯಾವುದೇ ಒಂದು ಸಮಾಜಕ್ಕೆ, ಒಂದು ಧರ್ಮ– ಜಾತಿಯ ಜನಕ್ಕಾಗಿ ಅಲ್ಲ, ಭಾರತದ ಪ್ರತಿಯೊಬ್ಬ ಪ್ರಜೆಯ ಆಚಾರ– ವಿಚಾರಗಳಿಗೆ ರಕ್ಷಣೆ ಕೊಟ್ಟು ಅವರ ಬದುಕು ರೂಪಿಸಿದವರು ಅಂಬೇಡ್ಕರ್. ಜೀವ ಇದ್ದರೆ ಜೀವನ, ಆ ಜೀವಕ್ಕೆ ಸಂವಿಧಾನವೆಂಬ ಉಸಿರು ನೀಡಿದವರು ಅಂಬೇಡ್ಕರ್ ಎಂದರು.
ಮುಂದಿನ ಜನಾಂಗಕ್ಕೆ ಏನು ಕೊಡುಗೆ ನೀಡಿ ಹೋಗುತ್ತೇವೋ ಗೊತ್ತಿಲ್ಲ, ಆದರೆ ಬಾಬಾ ಸಾಹೇಬರು ನೀಡಿದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವಷ್ಟು ಜ್ಞಾನವನ್ನು ಜನರಿಗೆ ಕೊಟ್ಟು ಹೋದರೆ ಅದೇ ನಮ್ಮ ಸಾರ್ಥಕತೆ ಎಂದರು.
ಇಡೀ ನಮ್ಮ ಸರ್ಕಾರ ಅಂಬೇಡ್ಕರರ ವಿಚಾರಧಾರೆ, ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದೆ. ದೇಶದ ಉದ್ದಗಲಕ್ಕೂ ಯಾರದ್ದಾದರೂ ಪುತ್ಥಳಿ ಇದ್ದರೆ ಅದು ಅಂಬೇಡ್ಕರ್ ಅವರದ್ದು ಮಾತ್ರ. ಅವರು ನೀಡಿದ ಸಂವಿಧಾನ ರಕ್ಷಣೆಗೆ ಬದ್ಧರಾಗೋಣ, ಅದೇ ನಾವು ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ತಿಳಿಸಿದರು.