ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಂವಿಧಾನ ಶಿಲ್ಪಿಯೆ
ಆಕಾಶ ಕಳಚಿ ತಲೆಮೇಲೆ ಬಿದ್ದಂತಾಗಿದೆ
ಭೂಮಿ ಬಿರಿದಂತಾಗಿದೆ
ಬಿರುಗಾಳಿಯ ಸುಳಿಗೆ ಜೀವ ಹೋದಂತಾಗಿದೆ
ಕಗ್ಗತ್ತಲ ಕಾನನದ ಬೆಳಕು ಕಾಣದಂತಾಗಿದೆ
ಬೆಳಕಾಗಿ ಬನ್ನಿ ಸಂವಿಧಾನ ಶಿಲ್ಪಿಯೇ
ಬಾಯಾರಿ ಬಸವಳಿದು ಗಂಟಲು ಕಟ್ಟಿ ಉಸಿರು ನಿಂತು
ಕೆರೆ ಹಳ್ಳ ಬಾವಿಗಳು ಬತ್ತಿ
ನೀರು ಕೊಡದ ನಾಡಿನಲ್ಲಿ
ದಾಹ ತಣಿಸಲು ಬನ್ನಿ
ಕರುಣಾ ಸಮುದ್ರವೇ
ಹಸಿವೆಯಿಂದ ದೊಕ್ಕೆದೊಕ್ಕೆ ಸೇರಿ
ಪ್ರಾಣ ಬಾಯಿಗೆ ಬಂದು
ಸಮಾದಿಯಾಗುವ ಮುನ್ನ ಹಸಿವು ನೀಗಿಸಲು ಬನ್ನಿ
ಅನ್ನದಾತನೇ
ಊರು ಕೇರಿ ಮನೆ ಮಠ ಮಂದಿರ ಮಸೀದಿ ಮನಕೆ ಕವಿದಿರುವ
ಅಸ್ಪೃಶ್ಯತೆಯ ಬೇಡಿ ಕಳಚಿ ಸ್ವಾತಂತ್ರ್ಯಕೊಡು ಬನ್ನಿ
ಸಮಾನತೆಯ ಶಿಖರವೇ
ಮಾತಾಡುವ ಬಾಯಿ ಹೊಲಿದು
ಯೋಚಿಸುವ ಮೆದುಳು ಕಿತ್ತು
ಬಂದೂಕು ಬಾಂಬು ಚಾಕು ಚೂರಿ ನಡುವೆ ಅಭಿವ್ಯಕ್ತಿಯ
ನೀಡ ಬನ್ನಿ
ಮಾತು ಕಲಿಸಿದ ಮಾತೃ ಹೃದಯವೇ
ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಅಸ್ಪೃಶ್ಯ ಕರಿಯ ಬಿಳಿಯ ಬಡವ ಶ್ರೀಮಂತ
ಗಂಡು ಹೆಣ್ಣು ಬೇಧವ ಮರೆಸಿ ಸಮಾನತೆಯ ಭಾರತವ ಕಟ್ಟು ಬನ್ನಿ
ಭಾರತ ಭಾಗ್ಯವಿಧಾತನೇ
ಮೌಡ್ಯ ಅಂಧಕಾರ ಕೊಲೆ ಸುಲಿಗೆ ಮೋಸವಂಚನೆ ತಡೆದು
ಶಿಕ್ಷಣ ಸಂಘಟನೆ ಹೋರಾಟದ ಬೀಜ ಬಿತ್ತ ಬನ್ನಿವಿಶ್ವಜ್ಞಾನಿಯೆ
ಡಾ.ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ, ಕನ್ನಡ ಉಪನ್ಯಾಸಕರು
ಬಾಲಕಿಯರ ಸ.ಪ.ಪೂ.ಕಾಲೇಜು ಚಿತ್ರದುರ್ಗ.

