ವಾತ್ಸಲ್ಯ ಯೋಜನೆಯಡಿ ನಿರ್ಗತಿಕರಿಗೆ ಮನೆಗಳ ನಿರ್ಮಾಣ

News Desk

ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು
ಸಮಾಜದಲ್ಲಿ ಮಹಿಳಾ ಸಬಲೀಕರಣದೊಂದಿಗೆ ಅಸಹಾಯಕರಿಗೆ ಮನೆ ನಿರ್ಮಾಣ ಹಾಗೂ ಮೂಲ ಸೌಕರ್ಯ ಕಲ್ಪಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಡಿಯ ಅನುಷ್ಠಾನಗೊಂಡಿರುವ ವಾತ್ಸಲ್ಯ ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಬೇಕೆಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ಯೋಜನಾಧಿಕಾರಿ ಹೆಚ್. ಶಶಿಧರ್ ತಿಳಿಸಿದರು.

ತಾಲೂಕಿನ ರಾಯಾಪುರ ವಲಯದ ಸಿದ್ದಯ್ಯನಕೋಟೆ ಕಾರ್ಯಕ್ಷೇತ್ರದಲ್ಲಿ ಅಸಹಾಯಕರಾದ ನಿಂಗಮ್ಮ ಮತ್ತು ನಾಗರಾಜಪ್ಪ ಕುಟುಂಬಕ್ಕೆ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ಹಸ್ತಾಂತರಿಸಿ ಅವರು ಮಾತನಾಡಿದರು.   

         ಪ್ರತಿಯೊಬ್ಬರೂ ವಾಸಿಸಲು ವಸತಿ ಅತ್ಯವಶ್ಯಕವಾಗಿದೆ. ಬಡ ನಿರ್ಗತಿಕ ಕುಟುಂಬದ ಮಹಿಳೆಯರು ಅಸಹಾಯಕತೆಯಿಂದ ಸಂಕಷ್ಟದಲ್ಲಿರುವವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿ ವಸತಿ ಸೌಲಭ್ಯದ ಕಲ್ಪಿಸುತ್ತಿರುವುದು ತುಂಬಾ ಪ್ರಯೋಜನಕಾರಿಯಾಗಿದೆ. ಅರ್ಹ ಫಲಾನುಭವಿಗಳು ಅರ್ಹ ದಾಖಲಾತಿಗಳನ್ನು ನೀಡಿ ಈ ಸೌಲಭ್ಯ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.         

      ತಾಲೂಕಿನಲ್ಲಿ ೭ ಹೊಸ ಮನೆ ನಿರ್ಮಾಣ, ೫ ಮನೆ ದುರಸ್ತಿ, ೯ ಶೌಚಾಲಯ ನಿರ್ಮಾಣ, ೬೧ ಜನ ಅಸಹಾಯಕರು ಹಾಗೂ ನಿರ್ಗತಿಕರಿಗೆ ಪ್ರತಿ ತಿಂಗಳು ಒಂದು ಸಾವಿರ ಮಾಸಾಶನ, ೬ ಜನ ಅಸಹಾಯಕರಿಗೆ ಪ್ರತಿ ತಿಂಗಳು ೩ ಕೆ.ಜಿ. ವಾತ್ಸಲ್ಯ ಮಿಕ್ಸ್ ವಿತರಣೆ, ೩೫ ವಾತ್ಸಲ್ಯ ಕುಟುಂಬಗಳಿಗೆ ಬಟ್ಟೆ, ಪಾತ್ರೆ ಕಿಟ್ಟು ವಿತರಣೆ ಜಲಮಂಗಲ ಸಲಕರಣೆಗಳಾದ ವಾಟ್ ಆರ್ ಯು ವಾಕಿಂಗ್ ಸ್ಟಿಕ್, ಯು ಶೇಪ್ ವಾಕರ್ ವಿತರಣೆ ಮಾಡಲಾಗುವುದೆಂದು ತಿಳಿದರು.          

   ಜ್ಞಾನವಿಕಾಸ ಸಮನ್ವಯಾಧಿಕಾರಿ ಅಂಬಿಕಾ ಮಾತನಾಡಿ ತಾಲೂಕಿನ ನಿಂಗಮ್ಮ ನಾಗರಾಜಪ್ಪ ರವರಿಗೆ ನಾಲ್ಕು ಮೊಮ್ಮಕ್ಕಳಿದ್ದು ಮಕ್ಕಳ ತಂದೆ ತಾಯಿ ಇಲ್ಲದ ಕಾರಣ ಅಜ್ಜ ಅಜ್ಜಿ ಆಶ್ರಯದಲ್ಲಿ ಚಿಕ್ಕಂದಿನಿಂದ ಬೆಳೆಯುತ್ತಿವೆ. ಈ ಮಕ್ಕಳನ್ನು ಸಾಕಲು ತುಂಬಾ ಕಷ್ಟಕರವಾಗಿರುವ ಪರಿಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಅವರ ಸ್ಥಿತಿಗತಿ ಗುರುತಿಸಿ ಅವರಿಗೆ ಪ್ರತಿ ತಿಂಗಳು ಒಂದು ಸಾವಿರ ರೂ ಮಾಶಾಸನ ನೀಡಲಾಗುತ್ತಿದೆ.

ಈ ಮಕ್ಕಳ ಅಜ್ಜ ಅಜ್ಜಿಗೆ ವಯಸ್ಸಾಗುತ್ತಿದ್ದು ಅವರ ಆರೋಗ್ಯದ ಪರಿಸ್ಥಿತಿ ಉತ್ತಮವಾಗಿರದ  ಕಾರಣ ಮನಗಂಡು ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಿತಿ ಯವರೊಂದಿಗೆ ಮಾತನಾಡಿ ಮಕ್ಕಳನ್ನು ಚಿತ್ರದುರ್ಗದ ಬಾಲಕರ ಬಾಲ ಮಂದಿರದಲ್ಲಿ ಎರಡು ಮಕ್ಕಳನ್ನು ಸೇರಿಸಲಾಗಿದೆ. ಇವರು ವಾಸಿಸಲು ಸೂರಿಲ್ಲದ ಕಾರಣ ಬೇರೆ ಬೇರೆ ಮನೆಯಲ್ಲಿ ಹಾಗೂ ವಾಸಿಸಲು ಯೋಗ್ಯವಿಲ್ಲದ ಮನೆಯಲ್ಲಿ ವಾಸವಾಗಿದ್ದರು.

ಅದನ್ನು ಕಂಡು ರಾಯಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪಿ.ಡಿ.ಒ ಅಧಿಕಾರಿಯೊಂದಿಗೆ ಚರ್ಚಿಸಿ ಗ್ರಾಮದ ಮಧ್ಯದಲ್ಲಿ ೩೦ x ೩೫ ಜಾಗವನ್ನು ಇವರ ಹೆಸರಿಗೆ ಖಾತೆ ಮಾಡಿಸಿದ ನಂತರ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ವಾತ್ಸಲ್ಯ ಕಾರ್ಯಕ್ರಮದಡಿ ೧,೪೦,೦೦೦ ಮೊತ್ತಕ್ಕೆ ಮನೆ ಮಂಜೂರಾತಿ ಮಾಡಿಸಿಕೊಂಡು ಆ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

ಸಿದ್ದಯ್ಯನಕೋಟೆಯ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠ  ಬಸವಲಿಂಗ ಸ್ವಾಮಿಗಳ ಸಮ್ಮುಖದಲ್ಲಿ ಅರ್ಹ ಫಲಾನುಭವಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠ ಕಾರ್ಯದರ್ಶಿ ಪಿ.ಆರ್.ಕಾಂತರಾಜ್, ವಲಯದ ಮೇಲ್ವಿಚಾರಕ ನರಸಿಂಹಪ್ಪ, ಸೇವಾ ಪ್ರತಿನಿಧಿ ಲಕ್ಷ್ಮಿ ಮತ್ತು ಚೆನ್ನಮ್ಮ ಒಕ್ಕೂಟದ ಪದಾಧಿಕಾರಿಗಳು ಹಾಗೂ ಮೊದಲಾದವರು ಭಾಗವಹಿಸಿದ್ದರು.

 

 

- Advertisement -  - Advertisement - 
Share This Article
error: Content is protected !!
";