ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ರೈತರ ಅಡಿಕೆ ತೋಟಗಳನ್ನು ಉಳಿಸುವುದಕ್ಕಾಗಿ ಕ್ಷೇತ್ರದ 493 ಹಳ್ಳಿಗಳಲ್ಲಿ ಕೆರೆ ಕಟ್ಟೆ ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ತಾಲ್ಲೂಕಿನ ರಂಗಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕೆರೆ ಕೋಡಿ ಬಿದ್ದಿರುವುದರಿಂದ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿದರು.
ಹತ್ತು ಲಕ್ಷ ರೂ.ಗಳನ್ನು ಕೊಟ್ಟಿದ್ದೇನೆ. ಹಂತ ಹಂತವಾಗಿ ಇನ್ನು ಅನುದಾನ ನೀಡುತ್ತೇನೆ. ಕ್ಷೇತ್ರಾದ್ಯಂತ ಮನೆ ಮನೆಗೆ ಬಿಸ್ಲರಿಗಿಂತ ಶುದ್ದವಾದ ಕುಡಿಯುವ ನೀರು ಪೂರೈಸುವುದಕ್ಕಾಗಿ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತರಲಾಗುವುದು.
ಮೂವತ್ತು ವರ್ಷಗಳಿಂದಲೂ ರಾಜಕಾರಣ ಮಾಡುತ್ತಿದ್ದೇನೆ. ಯಾರಿಂದಲೂ ಏನನ್ನು ಹೇಳಿಸಿಕೊಳ್ಳದೆ ಅಭಿವೃದ್ದಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದರು.
ಮಲ್ಲಾಡಿಹಳ್ಳಿ ಸಮೀಪ ಭದ್ರವಾದ ಬ್ರಿಡ್ಜ್ ಕಟ್ಟಿಸಿದ್ದೇನೆ. ಕ್ಷೇತ್ರದ ಜನ ಎಲ್ಲರೂ ಸಂತೋಷವಾಗಿರಬೇಕೆಂಬುದು ನನ್ನ ಉದ್ದೇಶ. ಭದ್ರಾ ಪ್ರಾಜೆಕ್ಟ್ ನೀರನ್ನು ಹಿರಿಯೂರಿನ ವಾಣಿವಿಲಾಸಸಾಗರಕ್ಕೆ ಹರಿಸುತ್ತಿರುವುದರಿಂದ ಎಂದಿಗೂ ಅಲ್ಲಿ ನೀರು ಖಾಲಿಯಾಗುವುದಿಲ್ಲ.
ಶಾಂತಿಸಾಗರದ ನೀರು ಕೆಸರಾಗಿರುವುದರಿಂದ ಕುಡಿಯಲು ಯೋಗ್ಯವಿಲ್ಲ ಎನ್ನುವುದನ್ನು ಗಮನಿಸಿ ವಿ.ವಿ.ಸಾಗರದಲ್ಲಿ ಅರವತ್ತು ಕೋಟಿ ರೂ.ವೆಚ್ಚದಲ್ಲಿ ಫಿಲ್ಟರ್ ಅಳವಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶಣ್ಣ, ಬಸವರಾಜಪ್ಪ, ರಾಜಪ್ಪ, ಗ್ರಾಮದ ಹಿರಿಯರು ಈ ಸಂದರ್ಭದಲ್ಲಿ ಹಾಜರಿದ್ದರು.