ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಬಸವ ವಸತಿ ಯೋಜನೆಗೆ ಈಗ ನೀಡುತ್ತಿರುವ 1.25 ಲಕ್ಷ ಸಹಾಯಧನವು ಯಾವುದಕ್ಕೂ ಸಾಕಾಗುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಲೇ ಇವೆ. ಇದು ಸರ್ಕಾರದ ಗಮನಕ್ಕೆ ಬಂದಿದ್ದು, ಆಯ್ಕೆಯಾದ ಫಲಾನುಭವಿಗಳಿಗೆ ಕನಿಷ್ಟ 3 ರಿಂದ 4 ಲಕ್ಷ ರೂ.ವರೆಗಾದರೂ ಸಹಾಯಧನ ಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ವಸತಿ, ವಕ್ಫ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ವಿಧಾನ ಪರಿಷತ್ತನಲ್ಲಿಂದು ಸದಸ್ಯರಾದ ಪ್ರದೀಪ ಶೆಟ್ಟರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು,ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡಲು ಬೇಕಾಗುವ ಕಚ್ಚಾ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಆದ್ದರಿಂದ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳಿಗೆ ಈಗ ನೀಡಲಾಗುತ್ತಿರುವ ಸಹಾಯಧನ ಹೆಚ್ಚಿಸುವ ಪ್ರಸ್ತಾವಣೆಯು ಪರಿಶೀಲನೆಯಲ್ಲಿರುತ್ತದೆ.
ಈ ಸಹಾಯಧನ ಹೆಚ್ಚಳ ಸಂಬಂದ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಈ ಬಗ್ಗೆ ಬರುವ ಬಜೆಟನಲ್ಲಿ ಪರಿಗಣಿಸುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದರು.
ಪ್ರಸ್ತುತ ಕೇಂದ್ರ ಸರ್ಕಾರದ ವಸತಿ ಯೋಜನೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ವಸತಿ ಯೋಜನೆಗಳಡಿ ಅನುದಾನ ಬಿಡುಗಡೆ ಮಾಡಲು ಬಾಕಿ ಇರುವುದಿಲ್ಲ. 2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಡಿ ಅಕ್ಟೋಬರ್-2025ರ ಅಂತ್ಯಕ್ಕೆ 1324.26 ರೂ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

