ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಜಮೀನಿನಲ್ಲಿ ಉಳುಮೆ ಮಾಡಲು ಮುಂದಾಗಿದ್ದ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ತನ್ನ ಓಲೈಕೆ ರಾಜಕಾರಣಕ್ಕೆ ರೈತರನ್ನು ಬಲಿಕೊಡಲು ಮುಂದಾಗಿದೆ ಈ ಕಟುಕ ಕಾಂಗ್ರೆಸ್ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ರೈತರ ಜಮೀನಿನ ಮೇಲೆ ಕಬ್ಜಾ ಮಾಡುವುದೇ ಅಲ್ಲದೆ, ಅವರ ಮೇಲೆ ಲಾಠಿ ಚಾರ್ಜ್ ಮಾಡಿ, ಟ್ರ್ಯಾಕ್ಟರ್ ವಶಕ್ಕೆ ಪಡೆದು ರೈತರ ವಿರುದ್ಧ ದೂರು ದಾಖಲಿಸಿಕೊಂಡಿದ್ದೀರಲ್ಲ, ನಿಮಗೆ ನಾಡಿನ ರೈತರಿಗಿಂತ ಓಲೈಕೆ ರಾಜಕಾರಣವೇ ಹೆಚ್ಚಾಯ್ತ? ಎಂದು ಅಶೋಕ್ ಸಿಎಂಗೆ ಪ್ರಶ್ನಿಸಿದ್ದಾರೆ.
ಅನ್ನ ಹಾಕುವ ಕೈಗಳಿಗೆ ಕೋಳ ತೊಡಿಸುವ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಅನ್ನದಾತರ ಶಾಪ ಈ ಸರ್ಕಾರವನ್ನು ಸುಡುವ ದಿನ ದೂರವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.