ಕಾಂಗ್ರೆಸ್ ಸರ್ಕಾರದ ಕೊಡುಗೆ ಎಂದರೆ ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ದುರಾಡಳಿತ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2.5 ವರ್ಷಗಳ ಕಾಂಗ್ರೆಸ್ ಆಡಳಿತ= ಕನ್ನಡಿಗರಿಗೆ 2.5 ವರ್ಷಗಳ ದುರಂತ! ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರದ 2.5 ವರ್ಷಗಳಲ್ಲಿ ಕರ್ನಾಟಕಕ್ಕೆ ಕೊಟ್ಟಿದ್ದು ಕೇವಲ ಮೂರು ದೌರ್ಭಾಗ್ಯಗಳನ್ನ: ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ದುರಾಡಳಿತ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ ಮಾಡಿದರು.

ಕಾಂಗ್ರೆಸ್ ಪಕ್ಷ ಕೊಟ್ಟ ಪ್ರತಿ ಭರವಸೆಯೂ ಹುಸಿಯಾಗಿದೆ, ಪ್ರತಿ ಗ್ಯಾರಂಟಿಯೂ ಹೊರೆಯಾಗಿದೆ. ಕಳೆದ 30 ತಿಂಗಳುಗಳಲ್ಲಿ ಕಾಂಗ್ರೆಸ್ ಸರ್ಕಾರ ಪ್ರತಿಯೊಂದು ದಾಖಲೆಯನ್ನು ಮುರಿದಿದೆ: ದಾಖಲೆ ಮಟ್ಟದ ಭ್ರಷ್ಟಾಚಾರ, ದಾಖಲೆ ಮಟ್ಟದ ಸಾಲ, ದಾಖಲೆ ಮಟ್ಟದ ದುರ್ವರ್ತನೆ. ಪ್ರತಿ ಇಲಾಖೆಯೂ ನಿಷ್ಕ್ರಿಯ, ಎಲ್ಲ ಯೋಜನೆಗಳೂ ಸ್ತಬ್ಧ, ಮತ್ತು ಪ್ರತಿ ಹಗರಣವೂ ಹಿಂದಿನದನ್ನು ಮೀರಿಸುತ್ತಿದೆ.

- Advertisement - 

ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿಗಳ ಮೇಲೆ ಅಧಿಕಾರಕ್ಕೆ ಬಂದಿತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಸರ್ಕಾರ ಖಾತರಿಪಡಿಸುವುದು ಕೇವಲ ನಿರಂತರ ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ದುರಾಡಳಿತ.  ಕನ್ನಡಿಗರು ಕಾಂಗ್ರೆಸ್ ಪಕ್ಷವನ್ನ ನಂಬಿ ಮತ ನೀಡಿದ್ದಕ್ಕೆ ತೆತ್ತುತ್ತಿರುವ ಬೆಲೆ ಇದು ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಜನರ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ರೈತರು ಆಕ್ರೋಶದಲ್ಲಿದ್ದಾರೆ, ಯುವಕರು ನಿರುದ್ಯೋಗ, ಅಭಿವೃದ್ಧಿ ಶೂನ್ಯತೆಯಿಂದ ಬೇಸತ್ತಿದ್ದಾರೆ ಮತ್ತು ಕಾನೂನು ಸುವ್ಯವಸ್ಥೆ ಕುಸಿತದಿಂದ ಜನಸಾಮಾನ್ಯರು, ಮಹಿಳೆಯರು ಕಂಗಾಲಾಗಿದ್ದಾರೆ.

- Advertisement - 

ಕಳೆದ 30 ತಿಂಗಳುಗಳಲ್ಲಿ 2,400ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಿ ನೌಕರರು ಮತ್ತು ಗುತ್ತಿಗೆದಾರರೂ ಸಹ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಬೆಂಗಳೂರಿನ ಮೂಲಸೌಕರ್ಯವು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಸರ್ವರೋಗಕ್ಕೂ ಒಂದೇ ಮದ್ದು ಎನ್ನುವಂತೆ, ತನ್ನಿಂದ ಸೃಷ್ಟಿಯಾದ ಅವ್ಯವಸ್ಥೆಯನ್ನು ಸರಿಪಡಿಸುವ ಬದಲು, ಕಾಂಗ್ರೆಸ್ ಸರ್ಕಾರ ಪ್ರತಿ ವೈಫಲ್ಯಕ್ಕೂ, ಪ್ರತಿ ಸಮಸ್ಯೆಗೂ ಕೇಂದ್ರ ಸರ್ಕಾರವನ್ನು ದೂಷಿಸುವುದು, ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದನ್ನೇ ಕಾಯಕವಾಗಿಸಿಕೊಂಡಿದೆ.

ಇದು ಸರ್ಕಾರವಲ್ಲ; ಇದು 2.5 ವರ್ಷಗಳ ದುರಂತ. ಕನ್ನಡ ನಾಡಿನ ಜನ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ ತಪ್ಪಿಗೆ ದಿನನಿತ್ಯ ಪಶ್ಚಾತಾಪ ಪಡುತ್ತಿದ್ದಾರೆ. ಈ ನಾಲಾಯಕ್ ಕಾಂಗ್ರೆಸ್ ಸರ್ಕಾರವನ್ನ ಕಿತ್ತು ಬಿಸಾಕಲು ಕಾತುರದಿಂದ ಕಾಯುತ್ತಿದ್ದಾರೆ ಎಂದು ಅಶೋಕ್ ಎಚ್ಚರಿಸಿದರು.

Share This Article
error: Content is protected !!
";