ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ಧ ಜನಾಕ್ರೋಶ ಯಾತ್ರೆ ಮಾಡಲಿ-ಡಿಕೆಶಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಡುಗೆ ಅನಿಲ
, ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ ಹೊರೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಸ್ನೇಹಿತರು ಜನಾಕ್ರೋಶ ಯಾತ್ರೆ ಮಾಡಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಎಲ್​​ಪಿಜಿ ಹಾಗೂ ತೈಲ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ರಾಜ್ಯ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬಿಜೆಪಿ ಸ್ನೇಹಿತರು ಜನಾಕ್ರೋಶ ಯಾತ್ರೆ ಮಾಡುತ್ತಿದ್ದು, ಇವರಿಗೆ ಕೇಂದ್ರ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿ ಕಪಾಳಮೋಕ್ಷ ಮಾಡಿದೆ. ಬಿಜೆಪಿ ನಾಯಕರು ತಮ್ಮ ಆಕ್ರೋಶವನ್ನು ಕೇಂದ್ರ ಸರ್ಕಾರದ ವಿರುದ್ಧ ಮುಂದುವರಿಸಲಿ ಎಂದು ನಮ್ರತೆಯಿಂದ ಮನವಿ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಪ್ರತಿಭಟನೆ ಏಕೆ ಮಾಡುತ್ತಿಲ್ಲ?: ಈ ಹಿಂದೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿತ್ತು. ಈಗ ಟೋಲ್ ದರ ಏಕೆ ಹೆಚ್ಚಳವಾಗಿದೆ. ಇದರ ಬಗ್ಗೆ ಬಿಜೆಪಿಯವರು ಏತಕ್ಕಾಗಿ ಪ್ರತಿಭಟನೆ ಮಾಡುತ್ತಿಲ್ಲ ಎಂದು ಡಿಸಿಎಂ ಕಿಡಿಕಾರಿದ್ದಾರೆ.

ನಾವು ಹಾಲಿನ ದರ ಹೆಚ್ಚಳ ಮಾಡಿರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ರೈತರ ಬದುಕನ್ನೂ ಸಹ ನಾವು ನೋಡಬೇಕಲ್ಲವೇ?, ರೈತರ ಪಕ್ಷ ಎಂದು ಕೇವಲ ಹಸಿರು ಟವೆಲ್ ಹಾಕಿಕೊಂಡರೆ ಸಾಕೇ?. ಊರುಗಳಿಗೆ ನಾವುಗಳು ಹೋದಾಗ ರೈತರು ನಮ್ಮನ್ನು ಹೊಡೆಯಲು ಬಂದಿಲ್ಲ, ಅದೇ ನಮ್ಮ ಪುಣ್ಯ.

ಅನೇಕ ರೈತರು ಹಸುಗಳನ್ನು ಮಾರಾಟ ಮಾಡಲು ಹೋಗುತ್ತಿದ್ದಾರೆ. ಈ ಹಿಂದೆ ಬೆಲೆ ಹೆಚ್ಚಳವಾದಾಗ ಅವರುಗಳೂ ಜನಪ್ರತಿನಿಧಿಗಳಾಗಿದ್ದರು ಅಲ್ಲವೇ?”ಎಂದು ಡಿಕೆ ಶಿವಕುಮಾರ್ ಟೀಕಿಸಿದರು. ಜೆಡಿಎಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದರ ಬಗ್ಗೆ ಸುಮ್ಮನೆ ಚರ್ಚೆ ಏಕೆ? ಬಿಜೆಪಿಯವರ ಪ್ರತಿಭಟನೆಗೆ ನಾನು ಶುಭಕೋರುತ್ತೇನೆ. ಅವರು ಪಕ್ಷ ಉಳಿಸಿಕೊಳ್ಳಲು ರಾಜಕೀಯ ಮಾಡುತ್ತಿದ್ದಾರೆ ಮಾಡಲಿ ಎಂದರು.

ಬಿಜೆಪಿ ಅವರು ಮಾತನಾಡಬೇಕಲ್ಲ ಎಂದು ಮಾತನಾಡುತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆಯಿದೆ ಎಂದು ಹೇಳಿದರು.

Share This Article
error: Content is protected !!
";