ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಪ್ರತಿವರ್ಷದಂತೆ ಈ ವರ್ಷವೂ ಸಹ ೭೨ ನೇ ಅಖಿಲ ಭಾರತ ಸಹಕಾರ ಸಪ್ತಾಹ-೨೦೨೫ ನವಂಬರ್ ೧೪ ರಿಂದ ೨೦ರವರೆಗೆ ರಾಷ್ಟಾದ್ಯಂತ ಆಚರಣೆ ಮಾಡಲಾಗುತ್ತಿದ್ದು ಈ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಹಿರಿಯೂರು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಹಕಾರ ಸಂಘಗಳಿಗೆ ನವೆಂಬರ್ ೧೬ ರ ಭಾನುವಾರದಂದು ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ನಡೆಸಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬುದಾಗಿ ಸಿಡಿಓ ಶಿವಮೂರ್ತಿ ಹೇಳಿದರು.
ನಗರದ ಡಿಸಿಸಿ ಬ್ಯಾಂಕ್ ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಂಡಳಿ ನಿ.ಬೆಂಗಳೂರು, ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ.ಚಿತ್ರದುರ್ಗ, ಚಿತ್ರದುರ್ಗ ಜಿಲ್ಲೆಯಲ್ಲಿ ಬರುವ ಎಲ್ಲಾ ಸಹಕಾರ ಸಂಘಗಳು ಹಾಗೂ ಬ್ಯಾಂಕುಗಳ ಸಹಭಾಗಿತ್ವದಲ್ಲಿ ನವಂಬರ್ ೧೬ ರಂದು ನಡೆಸಲಾಗುತ್ತಿರುವ ೭೨ ನೇ ಅಖಿಲ ಭಾರತ ಸಹಕಾರ ಸಪ್ತಾಹ-೨೦೨೫ ಕಾರ್ಯಕ್ರಮದ ಪ್ರಯುಕ್ತ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಭೆಯಲ್ಲಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ ತಲಾ ೧೫೦೦ರೂ, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತಲಾ ೧೦೦೦ ರೂ, ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗಳಿಗೆ ತಲಾ ೩೦೦೦ ರೂ ಹಾಗೂ ಟಿ.ಎ.ಪಿ.ಎಂ.ಸಿ ಸಂಘಗಳಿಗೆ ತಲಾ ೫೦೦೦ ರೂಗಳನ್ನು ಸಹಕಾರಿ ಸಪ್ತಾಹಕ್ಕೆ ದೇಣಿಗೆಯನ್ನು ನೀಡುವಂತೆ ನಿರ್ಣಯಿಸಲಾಯಿತು ಎಂದರಲ್ಲದೆ,
ಕಳೆದ ವರ್ಷ ಉತ್ತಮ ಸಹಕಾರ ಸಂಘ ಎಂಬ ಸನ್ಮಾನಕ್ಕೆ ಭಾಜನರಾದ ಸಹಕಾರ ಸಂಘಗಳನ್ನು ಹೊರತುಪಡಿಸಿ, ಈ ಬಾರಿ ೭೨ ನೇ ಅಖಿಲ ಭಾರತ ಸಹಕಾರ ಸಪ್ತಾಹ-೨೦೨೫ ರ ಕಾರ್ಯಕ್ರಮದಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಂದ, ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ, ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗಳಿಂದ ಹಾಗೂ ಟಿ.ಎ.ಪಿ.ಎಂ.ಸಿ ಸಂಘಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸಿದ ತಲಾ ೫ ಸಂಘಗಳನ್ನು ಕಾರ್ಯಕ್ರಮದಲ್ಲಿ ಆಯ್ಕೆ ಮಾಡಿ ಸನ್ಮಾನಿಸಲಾಗುವುದು ಎಂಬುದಾಗಿ ಹೇಳಿದರು.
ಈ ಸಭೆಯಲ್ಲಿ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಪಿ.ಶಿವಮೂರ್ತಿ, ಟಿ.ಎ. ಪಿ.ಎಂ.ಸಿ ಅಧ್ಯಕ್ಷ ಶ್ರವಣಗೆರೆ ಹನುಮಂತರಾಯಪ್ಪ, ಚಿತ್ರದುರ್ಗ ಯೂನಿಯನ್ ನಿರ್ದೇಶಕ ಈರಲಿಂಗೇಗೌಡ, ರಾಜ್ಯ ಸಹಕಾರ ಮಂಡಳಿ ನಿ.ಬೆಂಗಳೂರು ಇದರ ನಿರ್ದೇಶಕ ಕಂದಿಕೆರೆ ಜಗದೀಶ್,
ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ್, ಚಿತ್ರದುರ್ಗ ಯೂನಿಯನ್ ಸಿಇಓ ಜಯಶ್ರೀ, ವ್ಯವಸ್ಥಾಪಕಿ ಸೌಮ್ಯ, ರೈತಮುಖಂಡ ಆಲೂರು ಸಿದ್ಧರಾಮಣ್ಣ, ಪ್ರಾಥಮಿಕ ಕೃಷಿ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ, ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಟಿ.ಎ. ಪಿ.ಎಂ.ಸಿ ಸಂಘಗಳ ಸಿಬ್ಬಂದಿಗಳು ಭಾಗವಹಿಸಿದ್ದರು.

