ಕೊರೋನಾ ಲಸಿಕೆಗೂ ಹೃದಯಾಘಾತದ ಸಾವಿಗೂ ಯಾವುದೇ ಸಂಬಂಧವಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕೊರೋನಾ ಲಸಿಕೆಗೂ ಹಾಸನದ ಹೃದಯಾಘಾತದ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಹಲವು ವೈಜ್ಞಾನಿಕ ಅಧ್ಯಯನಗಳು ಸಾಬೀತು ಮಾಡಿವೆ ಎಂದು ಕೇಂದ್ರ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

- Advertisement - 

ಸಾರ್ವಜನಿಕರಿಗೆ ಕೋವಿಡ್ ಲಸಿಕೆಯನ್ನು ಆತುರದ ಅನುಮೋದನೆಯೊಂದಿಗೆ ವಿತರಣೆ ಮಾಡಿದ್ದು ಕೂಡ ಈ ಸಾವುಗಳಿಗೆ ಕಾರಣವಾಗಿರಬಹುದು ಎಂಬ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಹಠಾತ್​ ಆಗಿ ಸಂಭವಿಸುತ್ತಿರುವ ಸಾವುಗಳ ಬಗ್ಗೆ ದೇಶದ ಹಲವಾರು ಆರೋಗ್ಯ ಸಂಸ್ಥೆಗಳು ತನಿಖೆ ಮಾಡಿವೆ. ಇದರಲ್ಲಿ ಅಂತಹ ಯಾವುದೇ ಅಂಶವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

- Advertisement - 

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ನಡೆಸಿದ ಅಧ್ಯಯನಗಳಲ್ಲಿ ಕೋವಿಡ್-19 ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ದೃಢಪಡಿಸಿವೆ.
ಲಸಿಕೆಯಿಂದ ಗಂಭೀರ ಅಡ್ಡಪರಿಣಾಮ ಉಂಟಾಗಿದ್ದು ಅಪರೂಪ. ಹೀಗಾಗಿ
, ಹೃದಯಾಘಾತಕ್ಕೂ- ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜೀವನಶೈಲಿ, ವಂಶವಾಹಿ ಸೇರಿದಂತೆ ಹೃದಯಾಘಾತಕ್ಕೆ ಹಲವು ಕಾರಣಗಳಿವೆ. ಇದಲ್ಲದೆ ಈ ಮೊದಲಿರುವ ಆರೋಗ್ಯ ಸಂಬಂಧಿ ಕಾಯಿಲೆಗಳು, ಕೋವಿಡ್ ನಂತರದ ಸಮಸ್ಯೆಗಳು ಸೇರಿದಂತೆ ವ್ಯಾಪಕ ಅಂಶಗಳು ಹಠಾತ್ ಸಾವು ಉಂಟಾಗಿರಬಹುದು ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

- Advertisement - 

18 ರಿಂದ 45 ರ ಪ್ರಾಯದ ಯುವ ಜನರಲ್ಲಿ ವಿವರಿಸಲಾಗದ ಹಠಾತ್ ಸಾವುಗಳ ಹಿಂದಿನ ಕಾರಣಗಳನ್ನು ತಿಳಿಯಲು ಐಸಿಎಂಆರ್ ಮತ್ತು ಎನ್‌ಸಿಡಿಸಿ ಅಧ್ಯಯನ ನಡೆಸುತ್ತಿವೆ. ಕೋವಿಡ್-19 ಲಸಿಕೆಯು ಯುವಕರಲ್ಲಿ ಹಠಾತ್ ಸಾವಿನ ಅಪಾಯ ಸೃಷ್ಟಿಸುವುದಿಲ್ಲ ಎಂದು ಸಂಶೋಧನೆಗಳು ನಿರ್ಣಯಿಸಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಹೃದಯಾಘಾತದ ಸಾವುಗಳಿಗೆ ಕೋವಿಡ್ ಲಸಿಕೆಯೇ ಕಾರಣ ಎಂಬ ಹೇಳಿಕೆಗಳು ಸುಳ್ಳು, ದಾರಿತಪ್ಪಿಸುವ ಮತ್ತು ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಹಾಸನ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಲ್ಲಿ 20ಕ್ಕೂ ಹೆಚ್ಚು ಮಂದಿ ಸರಣಿಯಾಗಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಇದು ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ.

ಈ ಕುರಿತು ಎಕ್ಸ್​ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, ತರಾತುರಿಯಲ್ಲಿ ಕೊರೊನಾ ಲಸಿಕೆಗೆ ಅನುಮೋದನೆ ನೀಡಿ, ಜನರಿಗೆ ಹಂಚಿದ್ದು ಕೂಡ ಈ ಸಾವುಗಳಿಗೆ ಕಾರಣವಿರಬಹುದು. ವಿಶ್ವದ ಅನೇಕ ಅಧ್ಯಯನಗಳು ಇತ್ತೀಚೆಗೆ ಹೃದಯ ಸ್ತಂಭನಕ್ಕೆ ಕೋವಿಡ್​ ಲಸಿಕೆ ಕಾರಣ ಎಂಬುದನ್ನು ಹೇಳಿವೆ ಎಂದಿದ್ದಾರೆ.

ಎದೆ ನೋವು ಅಥವಾ ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡುಬಂದರೆ ಪ್ರತಿಯೊಬ್ಬರೂ ತಕ್ಷಣ ತಪಾಸಣೆಗಾಗಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ. ಈ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಎಂದು ಅವರು ಸೂಚಿಸಿದ್ದಾರೆ.

 

Share This Article
error: Content is protected !!
";