ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಳಮಟ್ಟದ ಸಣ್ಣಸಣ್ಣ ಸಮುದಾಯಗಳ ಸಬಲೀಕರಣಕ್ಕೆ ಈವರೆಗಿನ ಎಲ್ಲಾ ಸರಕಾರಗಳು ಕಾಲಕಾಲಕ್ಕೆ ಸ್ಥಾಪಿಸಿರುವ ನಿಗಮ-ಮಂಡಳಿಗಳು ಭ್ರಷ್ಟರ ಕಪಿಮುಷ್ಠಿಯಲ್ಲಿ ಸಿಲುಕಿವೆ.
ಸಬಲೀಕರಣದ ಮೂಲ ಉದ್ದೇಶವೇ ಬುಡಮೇಲಾಗಿ ಜನರ ದುಡ್ಡು ಭ್ರಷ್ಟರ ಕಿಸೆ ಸೇರುತ್ತಿದೆ ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ವಾಲ್ಮೀಕಿ ನಿಗಮದಂತೆ ಭೋವಿ ನಿಗಮವೂ ಭ್ರಷ್ಟರು ಮತ್ತು ದಲ್ಲಾಳಿಗಳ ಅಡ್ಡೆಯಾಗಿ, ಸ್ವತಃ ನಿಗಮದ ಅಧ್ಯಕ್ಷನೇ ಕಮೀಷನ್ ದಂಧೆಯಲ್ಲಿ ಭಾಗಿಯಾಗಿರುವುದು ನಾಚಿಕೆಗೇಡು ಎಂದು ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
25 ಲಕ್ಷಕ್ಕೆ 5 ಲಕ್ಷ ಕಮಿಷನ್ ಎಂದರೆ ಕರ್ನಾಟಕ ಕಾಂಗ್ರೆಸ್ ಸರಕಾರದ ಆಡಳಿತ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ಜನತೆ ಗಮನಿಸಬೇಕು ಹಾಗೂ ಭೋವಿ ನಿಗಮದಲ್ಲಿ ನಡೆದಿರುವ ಕಮೀಷನ್ ಕರ್ಮಕಾಂಡದಲ್ಲಿ ಅಧ್ಯಕ್ಷನೇ ಕಿಂಗ್ ಪಿನ್ ಎನ್ನುವ ಆಘಾತಕಾರಿ ಸಂಗತಿ ಮಾಧ್ಯಮದಲ್ಲಿ ಬಯಲಾಗಿದೆ.
ಸರಕಾರವು ಕೂಡಲೇ ಈ ಅಧ್ಯಕ್ಷನನ್ನು ವಜಾ ಮಾಡಿ, ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಬೇಕು ಎಂದು ಹೆಚ್.ಡಿ ಕುಮಾರಸ್ವಾಮಿ ಆಗ್ರಹ ಮಾಡಿದ್ದಾರೆ.

