ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಲವು ನಿಗಮಗಳಿಗೆ ಬಿಡಿಗಾಸೂ ಇಲ್ಲ ಕೆಲವು ನಿಗಮಗಳಿಗೆ ಬರೀ ಪುಡಿಗಾಸು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹರಿಹಾಯ್ದಿದ್ದಾರೆ.
ಪರಿಶಿಷ್ಟರು, ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕೆ ಸ್ಥಾಪಿಸಲಾಗಿರುವ ಹಲವು ನಿಗಮ ಮಂಡಳಿಗಳಿಗೆ ಬಿಡಿಗಾಸೂ ಅನುದಾನ ಇಲ್ಲದೆ, ಕೆಲವು ನಿಗಮಗಳಿಗೆ ಪುಡಿಗಾಸು ಬಿಡುಗಡೆ ಮಾಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ನಾಡಿನ ಜನತೆಗೆ ದ್ರೋಹ ಬಗೆದಿದೆ ಎಂದು ಅವರು ಆರೋಪಿಸಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ಇದೇನಾ ಬಡವರು, ಪರಿಶಿಷ್ಟರು, ಹಿಂದುಳಿದವರ ಬಗ್ಗೆ ತಮಗಿರುವ ಕಾಳಜಿ? ಇದೇನಾ ಗಾಂಧಿ ಭಾರತ ನಿರ್ಮಿಸುವ ಪರಿ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಅಹಿಂದ ಹೆಸರಿನಲ್ಲಿ ಜನರಿಗೆ ವಿಶ್ವಾಸದ್ರೋಹ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.