ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯ………ಕಾಸ್ಟ್ ಕೌಚಿಂಗ್ ಅಥವಾ ಮೀ ಟೂ ಅಥವಾ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅಥವಾ ಮಹಿಳಾ ಶೋಷಣೆ ಅಥವಾ ಹೆಣ್ತನದ ದುರುಪಯೋಗ ಅಥವಾ ಇನ್ನೂ ಏನೇನೋ ಹೆಸರುಗಳಿಂದ ಕರೆಯಬಹುದಾದ ವಿವಾದ ಮತ್ತೆ ಭುಗಿಲೆದ್ದಿದೆ……
ಹಲವಾರು ವರ್ಷಗಳಿಂದ ಕೇಳಿ ಬರುತ್ತಿರುವ ಈ ಸುದ್ದಿಗಳು ಆಗಾಗ ಬಹಿರಂಗವಾಗಿ ಸ್ಪೋಟಗೊಳ್ಳುತ್ತವೆ. ಇದೀಗ ಮಲಯಾಳಂ ಚಿತ್ರರಂಗದಲ್ಲಿ ಸುದ್ದಿಯಾದ ಈ ವಿಷಯ ಈಗ ಕನ್ನಡ ಚಿತ್ರರಂಗದಲ್ಲೂ ಚರ್ಚೆ ಹುಟ್ಟು ಹಾಕಿದೆ……
ಮೂಲಭೂತವಾಗಿ ಈ ಸಮಸ್ಯೆಯನ್ನು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿ ಚರ್ಚಿಸುವುದೇ ಹಾಸ್ಯಾಸ್ಪದ. ಇದು ಇಡೀ ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಅಂದರೆ ಒಟ್ಟಾರೆಯಾಗಿ ಈ ಸಮಾಜದಲ್ಲಿ ಅಂತರ್ಗತವಾಗಿ ನಡೆಯುತ್ತಿರುವ ಪ್ರತಿಕ್ಷಣದ ಕ್ರಿಯೆ ಪ್ರಕ್ರಿಯೆ ಪ್ರತಿಕ್ರಿಯೆಗಳು…..
ಹೆಣ್ಣನ್ನು ಅವಕಾಶ ಆಧರಿಸಿ ಎಷ್ಟು ಸಾಧ್ಯವೋ ಅಷ್ಟು ಶೋಷಣೆಗೆ ಒಳಪಡಿಸಲು ಕೆಲವು ಸಾಮಾನ್ಯರು, ಕೆಲವು ದುಷ್ಟ ಶಕ್ತಿಗಳು, ಕೆಲವು ವಿಕೃತ ಮನಸ್ಸಿನವರು ಸದಾ ಪ್ರಯತ್ನಿಸುತ್ತಲೇ ಇರುತ್ತಾರೆ. ಇದು ನಿರಂತರವಾಗಿ ನಡೆದುಕೊಂಡು ಬರುತ್ತಿದೆ…..
ಈ ವಿಷಯದ ಆಳ ಅಗಲಗಳನ್ನು ಚರ್ಚಿಸುವ ಮೊದಲು ಮತ್ತೊಂದು ಒಳ್ಳೆಯ ಆಯಾಮವೂ ನಮ್ಮ ಗಮನದಲ್ಲಿರಬೇಕು. ಅಂದರೆ ನನ್ನ ಅನುಭವದ ಆಧಾರದ ಮೇಲೆ ಹೇಳುವುದಾದರೆ ಈ ಸಮಾಜದ ಶೇಕಡ 50ಕ್ಕೂ ಹೆಚ್ಚು ಪುರುಷರು ಯಾವ ಕಾರಣಕ್ಕೂ ಮಹಿಳೆಯನ್ನು ಭೋಗದ ವಸ್ತು, ಕಾಮದ ವಸ್ತು ಶೋಷಣೆಗೆ ಒಳಪಡಿಸಬಹುದಾದ ಜೀವ ಎನ್ನುವ ಯಾವ ತಪ್ಪುಕಲ್ಪನೆಯನ್ನು ಇಟ್ಟುಕೊಳ್ಳದೆ ಅಕ್ಕ ತಂಗಿ ಗೆಳತಿ ಹೆಂಡತಿ ಪ್ರೇಯಸಿ ತಾಯಿ ಅತ್ತಿಗೆ ಸೊಸೆ ಮುಂತಾದ ಸಂಬಂಧಗಳನ್ನು ನಿರ್ದಿಷ್ಟವಾಗಿ, ಅದಕ್ಕೆ ತಕ್ಕಂತೆ ಅತ್ಯಂತ ಗೌರವದಿಂದ, ಮಾನವೀಯತೆಯಿಂದ ನಡೆಸಿಕೊಳ್ಳುತ್ತಾರೆ….
ಉಳಿದ ಸುಮಾರು ಮೂವತ್ತರ ಶೇಕಡ 30ರಷ್ಟು ಗಂಡಸರು ಎಲ್ಲೋ, ಯಾವಾಗಲೂ ಯಾವುದೇ ತೊಂದರೆ ಇಲ್ಲ ಎಂಬ ಭರವಸೆ ಮೂಡಿದರೆ, ಅವಕಾಶ ದೊರೆತರೆ, ಸಹಾಯದ ನೆಪದಲ್ಲೋ, ಆಮಿಷದ ನೆಪದಲ್ಲೋ, ಹಣಕಾಸಿನ ಆಸೆ ಒಡ್ಡಿಯೋ, ಕಪಟ ಮುಖವಾಡದ ಭಾವದಿಂದಲೋ ಒಪ್ಪಿತ ಅನೈತಿಕ ಸಂಬಂಧವನ್ನು ಹೊಂದುತ್ತಾರೆ…..
ಇನ್ನುಳಿದ ಶೇಕಡಾ 15ರಷ್ಟು ಜನ ಹೆಣ್ಣನ್ನು ಭೋಗದ ವಸ್ತುವೆಂದು ತಿಳಿದು ಯಾವ ದುಷ್ಟ ಮಾರ್ಗದಿಂದಲಾದರೂ ಹೆಣ್ಣಿನ ಸಂಪರ್ಕಕ್ಕೆ ಹಾತೊರೆಯುವ, ಅದಕ್ಕಾಗಿ ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗುವ ಮನಸ್ಥಿತಿ ಹೊಂದಿರುತ್ತಾರೆ. ಇವರೇ ನಿಜವಾದ ಹೆಣ್ಣಿನ ಶೋಷಣೆಯ ಮಹಾನ್ ಕಿರಾತಕರು. ಇದನ್ನು ಹೊರಪಡಿಸಿ ಶೇಕಡ ಐದರಷ್ಟು ವಿಕೃತಕಾಮಿಗಳು ಇದ್ದಾರೆ. ಇವರು ಅತ್ಯಂತ ವಿಕೃತ ಮನಸ್ಸಿನವರು. ಕಾನೂನು ಕಟ್ಟಲೆಗಳ ಭಯವಿಲ್ಲದವರು. ಹೆಣ್ಣಿನ ಬಗ್ಗೆ ಯಾವುದೇ ರೀತಿಯ ಸಹಾನುಭೂತಿ ಹೊಂದಿಲ್ಲದವರು. ಕೊಲೆ ಅತ್ಯಾಚಾರವನ್ನು ಆನಂದಿಸುವವರು. ಇವರು ಹುಟ್ಟಾ ಕ್ರಿಮಿನಲ್ ಗಳು…..
ಹೀಗೆ ಈ ಸಮಾಜದಲ್ಲಿ ಸಾಮಾನ್ಯವಾಗಿ ಜನರ ಮನಸ್ಥಿತಿಯನ್ನು, ಹೆಣ್ಣಿನ ವಿಷಯದಲ್ಲಿ ಹೀಗೆ ವಿಂಗಡಿಸಬಹುದು. ಇದು ಖಚಿತ ಅಧ್ಯಯನ ವರದಿಯಲ್ಲ. ಒಂದು ಅನುಭವದ ಅಂದಾಜು ಮಾತ್ರ…..
ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿಯೇ ಮತ್ತು ಈ ಸಾಮಾಜಿಕ ರಚನೆಯ ವಿಧಾನದಲ್ಲಿಯೇ ಶೋಷಣೆ ಎಂಬುದು ಅಡಗಿದೆ. ಇದು ಕೇವಲ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಬಲಾಢ್ಯರು ದುರ್ಬಲರನ್ನು ಶೋಷಿಸಲೆಂದೇ ಈ ಸಾಮಾಜಿಕ ವ್ಯವಸ್ಥೆ ರೂಪಿತವಾಗಿದೆ…..
ಅದು ಆರ್ಥಿಕವಾಗಿಯೇ ಇರಲಿ, ಜಾತಿ ವ್ಯವಸ್ಥೆಯೇ ಇರಲಿ, ಶೈಕ್ಷಣಿಕವಾಗಿಯೇ ಇರಲಿ ಒಟ್ಟಿನಲ್ಲಿ ಬಲಾಢ್ಯರು ದುರ್ಬಲರ ಮೇಲೆ ಸದಾ ಸವಾರಿ ಮಾಡುತ್ತಲೇ ಇರುತ್ತಾರೆ. ಅದಕ್ಕಾಗಿಯೇ ಅದನ್ನು ನಿಯಂತ್ರಿಸಲು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನ ಜಾರಿಯಾಗಿದೆ. ಆದರೆ ಅಲ್ಲೂ ಸಹ ಬಲಾಢ್ಯರು ಕಾನೂನಾತ್ಮಕವಾಗಿಯೇ ಶೋಷಣೆ ಮಾಡುತ್ತಾರೆ…..
ಅಂದರೆ ಒಟ್ಟಾರೆಯಾಗಿ ಮಾನವೀಯ ಮೌಲ್ಯಗಳು, ಜೀವನ ವಿಧಾನಗಳು, ನಾಗರೀಕ ಮೌಲ್ಯಗಳು ಮನುಷ್ಯನಲ್ಲಿ ಸಹಜವಾಗಿಯೇ ಬೆಳವಣಿಗೆ ಹೊಂದದೆ, ಅಜ್ಞಾನ, ಅಹಂಕಾರ, ದುಷ್ಟತನ ಮನುಷ್ಯನಲ್ಲಿ ಅಡಕವಾಗಿ ತನ್ನ ಸ್ವಾರ್ಥಕ್ಕಾಗಿ ಸ್ಪೋಟಗೊಂಡರೆ ಅದನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಎಷ್ಟೇ ಕಠಿಣ ಕಾನೂನುಗಳು, ಎಷ್ಟೇ ಅಧ್ಯಯನ ವರದಿಗಳು, ತನಿಖಾ ಆಯೋಗಗಳು ಬಂದರೂ ಅವೆಲ್ಲವೂ ಆ ಕ್ಷಣದ ಪ್ರತಿಕ್ರಿಯೆಗಳು ಮಾತ್ರವೇ. ಅದನ್ನು ಮೀರಿ ದುಷ್ಕೃತ್ಯಗಳು ನಡೆಯುತ್ತಲೇ ಇರುತ್ತದೆ……
ಇಷ್ಟೆಲ್ಲಾ ಆಧುನಿಕತೆ, ತಂತ್ರಜ್ಞಾನ, ಸಮೂಹ ಸಂಪರ್ಕ ಕ್ರಾಂತಿ, ವಿದ್ಯಾಭ್ಯಾಸ ಎಲ್ಲವೂ ಪಡೆದ ನಂತರವೂ ಕೇರಳದಂತ ಬಹುತೇಕ ವಿದ್ಯಾವಂತರಿರುವ ರಾಜ್ಯದಲ್ಲಿಯೇ, ಕರ್ನಾಟಕದಂಥ ಬುದ್ಧಿವಂತರಿರುವ ರಾಜ್ಯದಲ್ಲಿಯೇ, ಅದೂ ಬೆಳಕಿನ ಬಣ್ಣದ ಲೋಕವೆಂಬ ಚಿತ್ರರಂಗದಲ್ಲಿಯೇ ಇಷ್ಟೊಂದು ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವಾಗ ಇದನ್ನು ನಾಗರಿಕ ಸಮಾಜವೆಂದು ಹೇಗೆ ಕರೆಯುವುದು…..
ಯಾರೋ, ಎಲ್ಲೋ ಕೆಲವು ಅಜ್ಞಾನಿಗಳು, ಕ್ರಿಮಿನಲ್ ಗಳು ಈ ರೀತಿಯ ದೌರ್ಜನ್ಯವೆಸಗುತ್ತಿದ್ದರೆ ಅದನ್ನು ನಿಯಂತ್ರಿಸಬಹುದು. ಆದರೆ ಇಷ್ಟು ಮುಂದುವರಿದ ಸಮಾಜದಲ್ಲಿ, ಇಷ್ಟೊಂದು ಬಹಿರಂಗವಾಗಿ ಕಾಸ್ಟ್ ಕೌಚಿಂಗ್ ನಡೆಯುತ್ತಿದೆ ಎಂದರೆ ನಮ್ಮ ಸಮಾಜದ ಮೂಲ ರಚನೆಯನ್ನೇ ಪ್ರಶ್ನಿಸಬೇಕಾಗುತ್ತದೆ. ಆದ್ದರಿಂದ ಇದು ಶೋಷಣೆಯ ಒಂದು ವಿಧಾನ ಮಾತ್ರ. ಚಿತ್ರರಂಗ ಕೇವಲ ತನ್ನ ಶೋಷಣೆಗೆ ಮಾತ್ರ ಧ್ವನಿಯೆತ್ತಿದರೆ ಸಾಲದು. ಚಿತ್ರರಂಗ ತನ್ನ ಚಿತ್ರ ಕಥೆಗಳಲ್ಲಿಯೇ ಮಾನವಿಯ ಮೌಲ್ಯಗಳನ್ನು ಮೊದಲು ತುಂಬಬೇಕು. ಇಡೀ ಸಮಾಜ ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡಬೇಕು, ಅನುಸರಿಸಬೇಕು…..
ಅದನ್ನು ಹೊರತುಪಡಿಸಿ ಕೇವಲ ಯಾವುದೋ ಕೆಲವು ಘಟನೆಗಳನ್ನು ಮಾತ್ರ ಪ್ರತಿಭಟಿಸಿದರೆ ಅದರಿಂದ ಯಾವುದೇ ಪ್ರಯೋಜನವು ಆಗುವುದಿಲ್ಲ. ಮನುಷ್ಯ ತನಗೆ ಪೆಟ್ಟಾದಾಗ ಪ್ರತಿಕ್ರಿಸುತ್ತಾನೆ ನಿಜ. ಅದು ಸಹಜ. ಆದರೆ ಇತರರ ನೋವಿಗೆ ಸ್ಪಂದಿಸುವ ಗುಣ ಮತ್ತು ತಾನು ಮಾನವಿಯ ಮೌಲ್ಯಗಳ, ನಾಗರಿಕ ಮೌಲ್ಯಗಳ ಪರವಾಗಿ ತನ್ನ ನಡವಳಿಕೆಗಳನ್ನು ರೂಪಿಸಿಕೊಳ್ಳದಿದ್ದರೆ ಇದೆಲ್ಲವೂ ದಿನನಿತ್ಯದ ಚಟುವಟಿಕೆಗಳಾಗಿ, ಇನ್ನು ಎಷ್ಟೇ ವರ್ಷವಾದರೂ ನಿರಂತರವಾಗಿ ನಡೆಯುತ್ತಲೇ ಇರುತ್ತವೆ…..
ಆದ್ದರಿಂದ ದಯವಿಟ್ಟು ಒಳ್ಳೆಯತನವೆಂಬುದು ಆ ಕ್ಷಣದ ಪ್ರತಿಕ್ರಿಯೆಯಲ್ಲ. ಅದು ನಮ್ಮ ತಿಳುವಳಿಕೆ ಮತ್ತು ನಡವಳಿಕೆ ಎಂಬುದನ್ನು ಮಾಧ್ಯಮಗಳು, ರಾಜಕಾರಣಿಗಳು, ಆಡಳಿತಗಾರರು ಸೇರಿದಂತೆ ಎಲ್ಲರೂ ಅರ್ಥ ಮಾಡಿಕೊಂಡಾಗ ಮಾತ್ರ ಈ ಸಮಸ್ಯೆಗೆ ಒಂದು ಪರಿಹಾರ ಸಿಗಬಹುದು. ಇಲ್ಲದಿದ್ದರೆ ಇದು ಮತ್ತೊಂದು ಪ್ರಕರಣವಾಗಿ ದಾಖಲಾಗುತ್ತದೆ ಅಷ್ಟೇ……
ಲೇಖನ:ವಿವೇಕಾನಂದ. ಎಚ್. ಕೆ. 9844013068……