ಹಿರಿಯೂರು ಬಸ್ ಡಿಪೋ ಉದ್ಘಾಟನೆಗೆ ಕ್ಷಣಗಣನೆ
ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಬಹು ನಿರೀಕ್ಷೆಯ ಹಿರಿಯೂರು ಕೆಎಸ್ ಆರ್ಟಿಸಿ ಬಸ್ ಡಿಪೋ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು ತಾಲೂಕಿನ ಜನರ ದಶಕಗಳ ಕನಸೊಂದು ಈಡೇರಿದಂತಾಗಿದೆ.
ಇದೇ ತಿಂಗಳು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ನಗರದಲ್ಲಿ ಕೆ ಎಸ್ ಆರ್ ಟಿಸಿ ಬಸ್ ಡಿಪೋ ಉದ್ಘಾಟನೆ ಮಾಡಲಿದ್ದು ತಾಲೂಕಿನ ಸಾರಿಗೆ ವ್ಯವಸ್ಥೆಗೆ ಶಕ್ತಿ ತುಂಬಿದಂತಾಗಲಿದೆ.
ಕಳೆದ 2022ರ ಡಿಸೆoಬರ್ ತಿಂಗಳಲ್ಲಿ ನಗರದ ಹುಳಿಯಾರು ರಸ್ತೆಯ ತಾಲೂಕು ಕ್ರೀಡಾoಗಣದ ಸಮೀಪ ಮೂರು ಎಕರೆ ವಿಸ್ತೀರ್ಣದಲ್ಲಿ ಆರು ಕೋಟಿ ಅನುದಾನದೊಂದಿಗೆ ಶಂಕುಸ್ಥಾಪನೆ ನೆರವೇರಿದ್ದ ಡಿಪೋ ಕಾಮಗಾರಿ ಹಲವು ಕಾರಣಗಳಿಂದ ನಿಧಾನಗತಿಯಲ್ಲಿ ಸಾಗಿತ್ತು.
ಡಿಪೋ ಕಾಮಗಾರಿ ಮುಗಿಸಿ ಉದ್ಘಾಟನೆ ಮಾಡಲು ಸಂಘಟನೆಗಳು, ವಿವಿಧ ಜನಪರ ಹೋರಾಟಗಾರರು, ಮಾಧ್ಯಮಗಳು ಸಾಕಷ್ಟು ಗಮನಸೆಳೆದಿದ್ದರು. ಅಲ್ಲಿಂದ ಇಲ್ಲಿಯವರೆಗೆ ನಗದು ಮತ್ತು ಟಿಕೆಟ್, ಆಡಳಿತ, ಯಾಂತ್ರಿಕ, ಸಂಚಾರ ಭದ್ರತಾ ಶಾಖೆಗಳ ಕೊಠಡಿಗಳು, ತೈಲ ಇಂಧನ, ಬ್ಲಾಕ್ ಸ್ಮಿತ್ , ಕೆಎಂಪಿಎಲ್ ಗಾಳಿ ಸಂಕೇತಕ, ಟ್ರೇ ಬಾಕ್ಸ್, ವಿದ್ಯುತ್ ಜನಕ, ಪ್ಯಾನೆಲ್ ಬೋರ್ಡ್ ಕೊಠಡಿಗಳು ಪುರುಷ ಮತ್ತು ಮಹಿಳಾ ವಿಶ್ರಾಂತಿ ಕೊಠಡಿಗಳು, ಶೌಚಾಲಯ ಕೊಠಡಿಗಳು ನಿರ್ಮಾಣಗೊಂಡಿವೆ. ಸಾಲದಕ್ಕೆ ಅಗತ್ಯ ಇರುವಷ್ಟು ಸಿಬ್ಬಂದಿಗಳನ್ನು ಈಗಾಗಲೇ ನಿಗಮವು ನಿಯೋಜನೆ ಮಾಡಿ ಆದೇಶ ಮಾಡಿದೆ.
ಡೀಸೆಲ್ ಬಂಕ್ ನಿರ್ಮಾಣ ಕಾರ್ಯ ಒಂದಿಷ್ಟು ತಡವಾಗಿದ್ದು ಇದೀಗ ಅದೂ ಮುಗಿದಿದ್ದು ಬರುವ 30 ನೇ ತಾರೀಕು ತಾಲೂಕಿನ ಜನರ ಸಾರಿಗೆ ವ್ಯವಸ್ಥೆಗೆ ಹೊಸ ಕಾಯಕಲ್ಪ ಸಿಗಲಿದೆ.
ಪುಣೆ ಬೆಂಗಳೂರು ಮತ್ತು ಬೀದರ್ ಶ್ರೀರಂಗಪಟ್ಟಣ ಎಂಬ ಎರಡು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಅತಿ ಹೆಚ್ಚು ಕೆಎಸ್ಆರ್ ಟಿಸಿ ಬಸ್ ಗಳು ಸಂಚರಿಸುವ ಹಿರಿಯೂರು ತಾಲೂಕಿನಲ್ಲಿ ಬಸ್ ಡಿಪೋ ಅತ್ಯಂತ ಅವಶ್ಯಕ ಬೇಡಿಕೆಯಾಗಿತ್ತು.
ತಾಲೂಕಿನಲ್ಲಿ ಡಿಪೋ ಆರಂಭಿಸಬೇಕು ಎಂಬ ಕೂಗು 1998 ರಿಂದಲೂ ನಡೆಯುತ್ತಿತ್ತು. 2010 ರ ಬಿಜೆಪಿ ಸರ್ಕಾರದಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಅಂದು ಸಚಿವ ಡಿ ಸುಧಾಕರ್ ರವರು ಸಾರಿಗೆ ಸಚಿವ ಆರ್ ಅಶೋಕ್ ರವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಆಗ ಅನುಮೋದನೆ ದೊರೆತು ಅಂದಿನ ಸಾರಿಗೆ ಮಂತ್ರಿ ಆರ್ ಅಶೋಕರನ್ನು ಕರೆತಂದು ಹುಳಿಯಾರು ರಸ್ತೆಯಲ್ಲಿ ಡಿಪೋ ಕಾಮಗಾರಿ ಪೂಜೆ ಮಾಡಿಸಿದ್ದರು.
ಆನಂತರದ ರಾಜಕೀಯ ಬೆಳವಣಿಗೆಗಳಿಂದ ಡಿಪೋ ನಿರ್ಮಾಣ ನೆನೆಗುದಿಗೆ ಬಿದ್ದಿತ್ತು. ಆ ಜಾಗದಲ್ಲಿ ಜಾಲಿ ಗಿಡಗಳು ಬೆಳೆದಿದ್ದವು.ಆ ಜಾಗದಲ್ಲಿ ಡಿಪೋ ನಿರ್ಮಾಣ ಮಾಡಲು ಸಾಧ್ಯವಿಲ್ಲವೆಂದು ಪಟ್ರೆಹಳ್ಳಿ ಸಮೀಪ ರಿಸ ನಂಬರ್ 109 ರಲ್ಲಿ 8 ಎಕರೆ ಭೂಮಿಯನ್ನು ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಲಾಗಿತ್ತು. ಅಲ್ಲದೆ 10 ಕೋಟಿ ರೂ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು. ಆದರೆ ಕೋವಿಡ್ ಕಾರಣದಿಂದ ಕಾಮಗಾರಿ ಪ್ರಾರಂಭವಾಗಲಿಲ್ಲ.
ಕೊನೆಗೆ 2022 ಡಿಸೆಂಬರ್ ಆರರಂದು ಅಂದಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮತ್ತೆ ಸಾರಿಗೆ ಸಚಿವ ಶ್ರೀರಾಮುಲು ಅವರನ್ನು ಕರೆಯಿಸಿ ಹಳೆಯ ಜಾಗದಲ್ಲಿಯೇ 6 ಕೋಟಿ ವೆಚ್ಚದಲ್ಲಿ ಡಿಪೋ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.ಅಲ್ಲಿಂದ ಕುಂಟುತ್ತಾ ಸಾಗಿದ್ದ ಡಿಪೋ ಕಾಮಗಾರಿ ಕೊನೆಗೂ ಪೂರ್ಣಗೊಂಡಿದ್ದು ಉದ್ಘಾಟನೆ ಭಾಗ್ಯದ ಹತ್ತಿರ ಬಂದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಮರ್ಪಕ ಬಸ್ ಸೌಲಭ್ಯ ಇಲ್ಲದೇ ಪರದಾಡುವಂತಹ ಪರಿಸ್ಥಿತಿ ಇತ್ತು. ರೈತ ಸಂಘಟನೆಗಳು ಸಹ ಹಲವು ಹೋರಾಟ ಮಾಡಿ ಡಿಪೋ ಆರಂಭಕ್ಕೆ ಒತ್ತಾಯಿಸಿದ್ದವು.
ಜನರ ಅವಶ್ಯಕತೆಯನ್ನು ಅರಿತ ಸಚಿವ ಡಿ ಸುಧಾಕರ್ ರವರು ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ವೇಗ ಕೊಡಿಸಿ ಇದೀಗ ಉದ್ಘಾಟನೆ ಹಂತಕ್ಕೆ ತಂದಿದ್ದಾರೆ. ಅತೀ ಹೆಚ್ಚಿನ ಬಸ್ಸಿನ ಬೇಡಿಕೆ ಇರುವ ಹಿರಿಯೂರಿನಿಂದ ಶಿರಾ ತುಮಕೂರು ಹೋಗಿ ವಾಪಾಸ್ ಬರುವ ಬಸ್ ಗಳ ಸಂಖ್ಯೆ ಹೆಚ್ಚಿಸಬೇಕು ಎಂಬ ಬೇಡಿಕೆಯಿದೆ. ಹಿರಿಯೂರಿನಿಂದ ಶಿರಾವರೆಗೆ ಹಳ್ಳಿಗಳಲ್ಲಿ ನಿಲುಗಡೆಯ ಬಸ್ ಗಳ ವ್ಯವಸ್ಥೆ ಮಾಡಿ ಎಂಬ ಬೇಡಿಕೆಯೂ ಸೇರಿದಂತೆ ತಾಲೂಕಿನ ಜನರ ಸುಗಮ ಸಂಚಾರಕ್ಕೆ ಕೊನೆಗೂ ಕಾಲ ಕೂಡಿ ಬಂದಂತಾಗಿದೆ.

