ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ಕೂಟರ್ ಸವಾರನೊಬ್ಬ ಕಾರಿನ ಮಿರರ್‌ಟಚ್ ಮಾಡಿದ್ದಕ್ಕೆ ಸ್ಕೂಟರನ್ನು ಹಿಂಬಾಲಿಸಿಕೊಂಡು ಬಂದು ಅಪಘಾತವೆಸಗಿ ಯುವಕನ ಸಾವಿಗೆ ಕಾರಣರಾದ ಪತಿ-ಪತ್ನಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಜಿಮ್ ತರಬೇತುದಾರ ಮನೋಜ್ ಕುಮಾರ್ ಹಾಗೂ ಆತನ ಪತ್ನಿ ಆರತಿ ಶರ್ಮಾ ಬಂಧಿತ ಆರೋಪಿಗಳು.
ಬೆಂಗಳೂರಿನ ಜೆ.ಪಿ ನಗರ 7ನೇ ಹಂತದ ಶ್ರೀರಾಮ ಲೇಔಟ್ ಬಳಿ ಅಕ್ಟೋಬರ್ 25 ರಂದು ರಾತ್ರಿ ಅಪಘಾತವೆಸಗಿದ್ದ ದಂಪತಿ ಆರೋಪಿಗಳು, ಸ್ಕೂಟರ್ ಸವಾರ ದರ್ಶನ್ (24) ಸಾವಿಗೆ ಕಾರಣರಾಗಿದ್ದರು. ಮತ್ತೋರ್ವ ಸವಾರ ವರುಣ್(24) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಏನಿದು ಪ್ರಕರಣ:
ಕಳೆದ ಅಕ್ಟೋಬರ್ 25 ರಂದು ರಾತ್ರಿ ದರ್ಶನ್ ಹಾಗೂ ವರುಣ್ ಸಾಗುತ್ತಿದ್ದ ಸ್ಕೂಟರ್, ಮನೋಜ್ ಕುಮಾರ್‌ನ ಕಾರಿಗೆ ಟಚ್ ಆಗಿತ್ತು. ಇದರಿಂದ ಕಾರಿನ ಬಲ ಭಾಗದ ಮಿರರ್‌ಗೆ ಹಾನಿಯಾಗಿತ್ತು.
ಇದರಿಂದ ಸಿಟ್ಟಿಗೆದ್ದ ಮನೋಜ್ ಕುಮಾರ್, ತನ್ನ ಕಾರನ್ನು ರಿವರ್ಸ್ ತೆಗೆದುಕೊಂಡು ದರ್ಶನ್ ಹಾಗೂ ವರುಣ್ ಸಾಗುತ್ತಿದ್ದ ಸ್ಕೂಟರನ್ನು ಹಿಂಬಾಲಿಸಿದ್ದ. ಬಳಿಕ ರಾತ್ರಿ 11:30ರ ಸುಮಾರಿಗೆ ಜೆ.ಪಿ. ನಗರ 7ನೇ ಹಂತದ ಶ್ರೀರಾಮ ಲೇಔಟ್ ಬಳಿ ಉದ್ದೇಶ ಪೂರ್ವಕವಾಗಿ ಅಪಘಾತವೆಸಗಿದ್ದ. ಅಪಘಾತದ ರಭಸಕ್ಕೆ ಬೈಕ್ ಸಮೇತ ಮುಗ್ಗರಿಸಿ ರಸ್ತೆಯಲ್ಲಿ ಬಿದ್ದಿದ್ದ ದರ್ಶನ್, ತಲೆಗೆ ಗಂಭೀರ ಗಾಯವಾಗಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದ. ಗಾಯಗೊಂಡಿದ್ದ ವರುಣ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆರಂಭದಲ್ಲಿ ಜೆ.ಪಿ. ನಗರ ಸಂಚಾರ ಠಾಣೆ ಪೊಲೀಸರು ಅಪಘಾತ ಕುರಿತು ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ್ದರು. ಆದರೆ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಹೆಚ್ಚಿನ ತನಿಖೆ ಕೈಗೊಂಡಾಗ ಅಪಘಾತಕ್ಕೂ ಮುನ್ನ ನಡೆದಿದ್ದ ರೋಡ್ ರೇಜ್‌ನ ಸಿಟ್ಟಿಗೆ ಆರೋಪಿಗಳು 2 ಕಿ.ಮೀ ದೂರ ಹಿಂಬಾಲಿಸಿಕೊಂಡು ಬಂದು ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿರುವುದು ಬಯಲಾಗಿದೆ.
ಅಲ್ಲದೆ ಕೃತ್ಯವೆಸಗಿದ ಕೆಲ ಸಮಯದ ಬಳಿಕ ಅದೇ ಸ್ಥಳಕ್ಕೆ ಮಾಸ್ಕ್ ಧರಿಸಿಕೊಂಡು ಬಂದಿದ್ದ ಆರೋಪಿ ದಂಪತಿ, ರಸ್ತೆಯಲ್ಲಿ ಬಿದ್ದಿದ್ದ ಕಾರಿನ ಅವಶೇಷಗಳನ್ನು ಆಯ್ದುಕೊಂಡು ತೆರಳಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿತ್ತು.
ದಂಪತಿ ಬಂಧನ: ಅಪಘಾತ ಎಸಗಿ ಹತ್ಯೆ ಮಾಡಿದ್ದ ಆರೋಪಿ ದಂಪತಿ ಸಾಕ್ಷ್ಯನಾಶಕ್ಕೆ ಯತ್ನಿಸಿದ ಆರೋಪದಡಿ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು ಪೊಲೀಸರು ಇಬ್ಬರು ಆರೋಪಿಗಳನ್ನೂ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ ಜಗಲಾಸರ್ ತಿಳಿಸಿದ್ದಾರೆ.

