ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತದ ನೂತನ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ಆಯ್ಕೆಯಾಗಿದ್ದಾರೆ.
ಎನ್‌ಡಿಎ ನಾಮನಿರ್ದೇಶಿತರಾದ ಸಿ.ಪಿ. ರಾಧಾಕೃಷ್ಣನ್ ಅವರು ಭಾರತದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ಉಪರಾಷ್ಟ್ರಪತಿಗಳ ಚುನಾವಣೆಯಲ್ಲಿ ಸಿ.ಪಿ ರಾಧಾಕೃಷ್ಣನ್ ಅವರು ತಮ್ಮ ಪ್ರತಿಸ್ಪರ್ಧಿ ಬಿ. ಸುದರ್ಶನ್ ರೆಡ್ಡಿ ವಿರುದ್ಧ 452 ಮತಗಳನ್ನು ಪಡೆಯುವ ಮೂಲಕ ಸ್ಪಷ್ಟವಾಗಿ ಗೆಲುವು ಸಾಧಿಸಿದ್ದಾರೆ. ಸುದರ್ಶನ್ ರೆಡ್ಡಿ ಅವರು 300 ಮತಗಳನ್ನು ಪಡೆದಿದ್ದಾರೆ. ಇವರ ಗೆಲುವಿನ ಅಂತರ 152 ಮತಗಳಾಗಿದೆ.
ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ ರಾಧಾಕೃಷ್ಣನ್ ಅವರ ಹೆಸರನ್ನು ಘೋಷಿಸಲಾಯಿತು. ತಮ್ಮ ಅಭ್ಯರ್ಥಿಗೆ ಬೆಂಬಲ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ಮನವಿ ಮಾಡಿದ್ದರು. ಆದರೆ, ಇಂಡಿಯಾ ಬಣದ ಜಂಟಿ ಅಭ್ಯರ್ಥಿಯಾಗಿ ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗಿತ್ತು. ಉಪರಾಷ್ಟ್ರಪತಿ ಚುನಾವಣೆಗಳ ಮತದಾನ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಯಿತು.
ರಾಧಾಕೃಷ್ಣನ್ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ), ತೆಲುಗು ದೇಶಂ ಪಕ್ಷ (ಟಿಡಿಪಿ), ಜನತಾದಳ ಯುನೈಟೆಡ್ (ಜೆಡಿಯು), ಶಿವಸೇನೆ, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಅಸ್ಸಾಂ ಗಣ ಪರಿಷತ್ (ಎಜಿಪಿ), ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ), ಜನತಾದಳ ಜಾತ್ಯತೀತ (ಜೆಡಿಎಸ್) ಮತ್ತು ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸೇರಿದಂತೆ ಇತರರು ಬೆಂಬಲಿಸಿದರು. ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಕೂಡ ರಾಧಾಕೃಷ್ಣನ್ ಪರವಾಗಿ ಮತ ಚಲಾಯಿಸಿತು.
ಇಂಡಿ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ಅವರಿಗೆ ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಸಮಾಜವಾದಿ ಪಕ್ಷ (ಎಸ್‌ಪಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ), ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಆಮ್ ಆದ್ಮಿ ಪಕ್ಷ (ಎಎಪಿ), ರಾಷ್ಟ್ರೀಯ ಜನತಾದಳ (ಆರ್‌ಜೆಡಿ), ಶಿವಸೇನೆ (ಯುಬಿಟಿ), ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎಸ್‌ಪಿ) ಮತ್ತು ಎಡ ಪಕ್ಷಗಳು ಸೇರಿದಂತೆ ಇತರ ಪಕ್ಷಗಳು ಬೆಂಬಲ ನೀಡಿದವು.
ಬಿಜು ಜನತಾದಳ (ಬಿಜೆಡಿ), ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಸೇರಿದಂತೆ ಹಲವಾರು ಪಕ್ಷಗಳು ಮತದಾನದಿಂದ ದೂರ ಉಳಿದಿದ್ದು ವಿಶೇಷವಾಗಿತ್ತು. ಸಿ.ಪಿ ರಾಧಾಕೃಷ್ಣನ್ 437 ಮತಗಳನ್ನು ಪಡೆಯುವ ನಿರೀಕ್ಷೆಯಿತ್ತು, ಆದರೆ 452 ಮತಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಗೆಲುವು ಸಾಧಿಸಿದರು.

