ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಬಂಧನ ವೇಳೆ ಕರ್ತವ್ಯಲೋಪ ಆರೋಪದಡಿ ಖಾನಾಪುರ ಸಿಪಿಐ ಮಂಜುನಾಥ್ ನಾಯ್ಕ ಅವರನ್ನು ಅಮಾನತುಗೊಳಿಸಿ ಐಜಿಪಿ ವಿಕಾಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಸಿ.ಟಿ.ರವಿ ಅವರನ್ನು ಖಾನಾಪುರ ಠಾಣೆಗೆ ಕರೆತಂದು ಕರ್ತವ್ಯಲೋಪ, ನಿಷ್ಕಾಳಜಿ, ಬೇಜವಾಬ್ದಾರಿತನ ಪ್ರದರ್ಶನ ಆರೋಪ ಹಾಗೂ ಅಪಾದಿತರನ್ನು ಹೊರತುಪಡಿಸಿ ಠಾಣೆಯೊಳಗೆ ಯಾರನ್ನೂ ಬಿಡದಂತೆ ಆದೇಶ ನೀಡಿದ್ದರೂ ನಿರ್ಲಕ್ಷ್ಯವಹಿಸಿದ ಆರೋಪವಿದೆ.
ಈ ಅವಧಿಯಲ್ಲಿ ಬಿಜೆಪಿ ನಾಯಕರು ಸೇರಿ ಎಲ್ಲರನ್ನೂ ಠಾಣೆಯ ಒಳಗಡೆ ಬಿಟ್ಟಿದ್ದರು. ಮೇಲಾಧಿಕಾರಿಗಳ ಆದೇಶ ಉಲ್ಲಂಘಿಸಿದ ಆರೋಪದಡಿ ಇನ್ಸ್ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಸಿ.ಟಿ.ರವಿ ಪ್ರಕರಣದಲ್ಲಿ ಖಾನಾಪುರ ಸಿಪಿಐ ಮಂಜುನಾಥ್ ನಾಯ್ಕ ಅವರನ್ನು ಅಮಾನತು ಮಾಡಿರುವ ಕ್ರಮ ಖಂಡಿಸಿ ಡಿ.26ರಂದು ಗುರುವಾರ ಖಾನಾಪುರ ಬಂದ್‌ಗೆ ಕರೆ ನೀಡಲಾಗಿದೆ. ಈ ಬಂದ್‌ಗೆ ಬಿಜೆಪಿ ಸಹ ಬೆಂಬಲ ನೀಡಿದೆ.
ಗೃಹ ಸಚಿವರ ಪ್ರತಿಕ್ರಿಯೆ:
ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪೊಲೀಸ್ ಇಲಾಖೆ ಅಧಿಕಾರಿಗಳು ಅಮಾನತು ಮಾಡಿದ್ದಾರೆ. ನಾವು ಯಾವುದೇ ನಿರ್ದೇಶನ, ಸೂಚನೆ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.
ಸಿ.ಟಿ.ರವಿ ನೀಡಿದ ದೂರು ಎಲ್ಲವನ್ನೂ ಸಿಐಡಿಗೆ ಹಸ್ತಾಂತರಿಸಿದ್ದೇವೆ. ಈಗಾಗಲೇ ಸಿಐಡಿ ತನಿಖೆಗೆ ಆದೇಶ ಕೊಟ್ಟಿದ್ದೇವೆ. ಗೃಹ ಸಚಿವನಾಗಿ ಆ ಪ್ರಕರಣಗಳಿಗೆ ಸಂಬಂಧಿಸಿದ ವಿಚಾರಗಳ ಹೇಳಿಕೆ ಕೊಡುವುದಿಲ್ಲ ಎಂದರು.
ಬೆಳಗಾವಿಯಲ್ಲಿ ಡಿ.26 ಹಾಗೂ 27ರಂದು ಗಾಂಧಿ ಭಾರತ ಕಾರ್ಯಕ್ರಮ ನಡೆಯುತ್ತದೆ. ಕಾರ್ಯಕ್ರಮಕ್ಕೆ ಯಾವ ರೀತಿ ಭದ್ರತೆ, ಶಿಷ್ಟಾಚಾರ ಪಾಲಿಸಬೇಕು ಎಂದು ಸಭೆಯಲ್ಲಿ ತಿಳಿಸಿದ್ದೇನೆ. ಅಧಿವೇಶನ ಸಂದರ್ಭದಲ್ಲಿ ಬಂದ ಸುಮಾರು ನಾಲ್ಕೂವರೆ ಸಾವಿರ ಪೊಲೀಸರನ್ನು ಇರಿಸಿಕೊಂಡಿದ್ದೇವೆ.
ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನಿಸಿದ 26 ಜನರನ್ನು ಅಂದೇ ಪೊಲೀಸರು ಬಂಧಿಸಿ ಸಂಜೆಯವರೆಗೂ ಅವರನ್ನು ಇಟ್ಟುಕೊಂಡು ವಾರ್ನಿಂಗ್ ಮಾಡಿದ್ದಾರೆ. ಈಗ ಎರಡೂ ಪ್ರಕರಣ ಸಿಐಡಿಗೆ ವರ್ಗಾವಣೆ ಮಾಡಿದ್ದೇವೆ ಎಂದು ತಿಳಿಸಿದರು.
ಇಂದಿನ ಸಭೆಯಲ್ಲಿ ಸಿ.ಟಿ.ರವಿ ಪ್ರಕರಣ ಕುರಿತು ಯಾವುದೇ ಚರ್ಚೆ ಆಗಿಲ್ಲ.
ಕೇವಲ ಕಾಂಗ್ರೆಸ್ ಅಧಿವೇಶನ ಭದ್ರತೆ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಅವರಿಂದ ಯಾರೆಲ್ಲಾ ಬರ್ತಾರೆ ಎಂಬ ಮಾಹಿತಿ ಪಡೆದಿದ್ದೇವೆ. ಈಗಾಗಲೇ ಮೂರು ವಿಶೇಷ ವಿಮಾನಗಳು ಬರುತ್ತಿವೆ. ಪ್ರತಿಯೊಬ್ಬರನ್ನೂ ಸ್ವಾಗತಿಸಲು ಒಬ್ಬೊಬ್ಬರನ್ನು ಅಸೈನ್ ಮಾಡಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.