ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಸುಮಾರು 20 ಹಕ್ಕೊತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿ.21ರ ಭಾನುವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನಾ ಬಹಿರಂಗ ಸಭೆ ನೆಡೆಯಲಿದೆ ಎಂದು ಸಿಪಿಐ (ಎಂ) ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಸಿ ನರಸಿಂಹಮೂರ್ತಿ ತಿಳಿಸಿದರು.
ನಗರದ ಸಿಪಿಐ(ಎಂ) ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ಮತ್ತು ಜನ ವಿರೋಧಿ ನೀತಿಗಳ ವಿರುದ್ಧ ರಾಜ್ಯಾದ್ಯಂತ ಈಗಾಗಲೇ ಸಹಿ ಸಂಗ್ರಹ ಮಾಡಲಾಗಿದೆ. ಸುಮಾರು 20ಕ್ಕೂ ಹೆಚ್ಚು ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿಸೆಂಬರ್ 21 ರಂದು ಬೃಹತ್ ಪ್ರತಿಭಟನಾ ಬಹಿರಂಗ ಸಭೆ ನಡೆಯಲಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವರ್ಗಕ್ಕೆ ಹಾಗೂ ಸಾಮಾನ್ಯ ಜನತೆಗೆ ಕಲ್ಪಿಸಬೇಕಿರುವ ಸವಲತ್ತುಗಳನ್ನು ಹೋರಾಟ ಮಾಡಿ ಪಡೆಯುವ ಪರಿಸ್ಥಿತಿ ಎದುರಾಗಿದೆ. ಈ ಸಭೆಯಲ್ಲಿ ನಮ್ಮ ಜಿಲ್ಲೆಯಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದರು.
ಜಿಲ್ಲಾ ಸಮಿತಿ ಸದಸ್ಯ ಚಂದ್ರ ತೇಜಸ್ವಿ ಮಾತನಾಡಿ ರಾಜ್ಯದ ಎಲ್ಲಾ ಬೆಳೆಗಳಿಗೆ ಒಟ್ಟಾರೆ ಉತ್ಪಾದನಾ ವೆಚ್ಚಕ್ಕೆ ಶೇ.50 ಲಾಭಾಂಶ ಸೇರಿಸಿ ಕನಿಷ್ಟ ಬೆಂಬಲ ಬೆಲೆ ಕಾಯ್ದೆ ಜಾರಿ ಮಾಡಬೇಕು. ರೈತಾಧಾರಿತ ಕೃಷಿ ರಕ್ಷಿಸಬೇಕು. ಕಾರ್ಪೊರೇಟ್ ಲಾಭದ ಕೃಷಿ ಕೈಬಿಡಬೇಕು.
ಅನಗತ್ಯವಾದ ಭೂಸ್ವಾಧೀನ ನಿಲ್ಲಿಸಬೇಕು. ಬಿಜೆಪಿ ಸರ್ಕಾರದ ಕಾಲದಲ್ಲಿ ಜಾರಿಗೊಳಿಸಿದ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ರೈತರ ಭೂಮಿಯನ್ನು ರಕ್ಷಿಸಬೇಕು. ಬಡವರಿಗೆ ದಲಿತರಿಗೆ ಭೂಮಿಗಳನ್ನು ನೀಡಬೇಕು. ಬಗರ್ ಹುಕುಂ ಮತ್ತು ಅರಣ್ಯ ಸಾಗುವಳಿ ಭೂಮಿಗಳಿಗೆ ಹಕ್ಕುಪತ್ರಗಳನ್ನು ನೀಡಬೇಕು. ಬೆಂಗಳೂರಿನ ಸುತ್ತಮುತ್ತ ವಿವಿಧ ಉದ್ದೇಶಗಳಿಗೆ ಕೈಗಾರಿಕಾ ಅಭಿವೃದ್ಧಿ ಹೆಸರಿನಲ್ಲಿ ರೈತರ ಒಪ್ಪಿಗೆ ಇಲ್ಲದೆ ನಡೆಯುತ್ತಿರುವ ಬಲವಂತದ ಭೂಸ್ವಾಧೀನ ಈ ಕೂಡಲೇ ನಿಲ್ಲಿಸಬೇಕು ಎಂದು ಅಗ್ರಹಿದರು.
ಜಿಲ್ಲಾ ಸಮಿತಿ ಸದಸ್ಯ ಪಿ.ಎ. ವೆಂಕಟೇಶ್ ಮಾತನಾಡಿ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣ ಪೂರ್ಣಗೊಂಡು ನಾಲ್ಕು ವರ್ಷಗಳಿಂದ ಉದ್ಘಾಟನೆಯಾಗದಿರುವ ESI ಆಸ್ಪತ್ರೆಯನ್ನು ಕೂಡಲೇ ಉದ್ಘಾಟಿಸಿ ಕಾರ್ಮಿಕರಿಗೆ ಲಭ್ಯವಾಗುವಂತೆ ಮಾಡಬೇಕು. ಅಲ್ಲದೇ ಗೃಹ ಕೈಗಾರಿಕೆಯಾದ ನೇಯ್ಗೆ ಉದ್ಯಮವನ್ನು ಉಳಿಸಲು ಸರ್ಕಾರ ಮಧ್ಯ ಪ್ರವೇಶ ಮಾಡಬೇಕು,
ಜಿಲ್ಲೆಯಲ್ಲಿ ಮತ್ತು ದೊಡ್ಡಬಳ್ಳಾಪುರದಲ್ಲಿ ಈ ಉದ್ದಿಮೆಯನ್ನೇ ನಂಬಿ ಲಕ್ಷಾಂತರ ಜನರು ಬದುಕುತ್ತಿದ್ದಾರೆ. ಇವರು ಉತ್ಪಾದಿಸಿದ ಬಟ್ಟೆಗೆ ಬೆಲೆ ಮತ್ತು ಬೇಡಿಕೆ ಇಲ್ಲದೆ ತುಂಬಾ ಸಂಕಷ್ಟದಲ್ಲಿದ್ದಾರೆ. ಹೊರರಾಜ್ಯದ ಸೀರೆಗಳು ಮಾರುಕಟ್ಟೆಯನ್ನು ಆಕ್ರಮಿಸಿ ಕೊಂಡಿವೆ.ಇದರಿಂದ ಉದ್ಭವಿಸಿದ ಬಿಕ್ಕಟ್ಟಿನ ಪರಿಹಾರಕ್ಕೆ ರಾಜ್ಯ-ಕೇಂದ್ರ ಸರ್ಕಾರಗಳು ತಕ್ಷಣ ಮುಂದಾಗಬೇಕು. ನೇಕಾರ ಕಾರ್ಮಿಕರೆಲ್ಲರಿಗೂ ಸಮಾನ ಕೆಲಸದ ಸಮಯ ಮತ್ತು ಕೂಲಿ ನಿಗದಿಯಾಗಬೇಕು ಎಂದರು.
ಪ್ರಭ ಬೆಳವಂಗಲ ಮಾತನಾಡಿ ವಿದ್ಯುತ್, ಸಾರಿಗೆ, ನೀರು, ರಸ್ತೆ, ಮುಂತಾದ ಸೇವೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಎಲ್ಲಾ ಸೇವೆಗಳಿಗೂ ಜನರೇ ಪೂರ್ಣವಾಗಿ ಹಣ ಪಾವತಿಸಿಬೇಕೆಂಬ ಕಾರ್ಪೊರೇಟ್ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಇವುಗಳನ್ನು ತಡೆಯದಿದ್ದರೆ ಮುಂದೆ ಜನ ಸಾಮಾನ್ಯರಿಗೆ ಯಾವುದೂ ಸಿಗುವುದಿಲ್ಲ. ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕಾಗಿ ರೂಪಿಸಲಾಗಿರುವ ಕಾಯ್ದೆಗಳು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮುಂತಾದ ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಈ ಭಾಗಕ್ಕೆ ಕೃಷ್ಣಾ ನೀರನ್ನು ಒದಗಿಸಬೇಕು. ಕೆ.ಸಿ.ವ್ಯಾಲಿ ಮತ್ತು ವೃಷಭಾವತಿ ಯೋಜನೆಗಳಿಂದ ಬೆಂಗಳೂರು ನಗರದ ಕೊಳಚೆ ನೀರನ್ನು ಜಿಲ್ಲೆಯ ಕೆರೆಗಳು ತುಂಬಿಸುವ ಪ್ರಯತ್ನ ಕೈಬಿಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿಪಿಐಎಂ ತಾಲ್ಲೂಕು ಕಾರ್ಯದರ್ಶಿ ಎಸ್. ರುದ್ರಾರಾಧ್ಯ ಉಪಸ್ಥಿತರಿದ್ದರು.

