ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದರ್ಶನ್ ಗೆ ತಾತ್ಕಾಲಿಕ ಜಾಮೀನು……. ಅಳುತ್ತಿರುವ ರೇಣುಕಾ ಸ್ವಾಮಿಯ ಪುಟ್ಟ ಕಂದಮ್ಮ, ನಗುತ್ತಿರುವ ಕನ್ನಡ ಚಿತ್ರರಂಗದ ಕೆಲವು ಅತಿರಥ ಮಹಾರಥರು, ಕಲಾವಿದರು, ಮರುಗುತ್ತಿರುವ ದೇವರು, ಧರ್ಮಗಳ ನೀತಿ ಸಂಹಿತೆ, ಅಸಹಾಯಕವಾದ ಕಾನೂನು, ನ್ಯಾಯಾಧೀಶರುಗಳು, ಸಂಭ್ರಮಿಸುತ್ತಿರುವ ಕೆಲವು ಅಭಿಮಾನಿಗಳು, ಕೊರಗುತ್ತಿರುವ ಮಾನವೀಯ ಮನಸ್ಸುಗಳು, ಮೌನವಾಗುತ್ತಿರುವ ಒಂದಷ್ಟು ಮೌಲ್ಯಯುತ ಜೀವಗಳು………
ಹೌದು, ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ಕನ್ನಡದ ಪ್ರಖ್ಯಾತ ಸಿನಿಮಾ ನಟ ದರ್ಶನ್ ಅವರಿಗೆ ಕೊಲೆ ಆರೋಪದ ಪ್ರಕರಣದಲ್ಲಿ ಅನಾರೋಗ್ಯದ ಕಾರಣ ಬೆನ್ನುಹುರಿಯ ಶಸ್ತ್ರಚಿಕಿತ್ಸೆಗಾಗಿ ನ್ಯಾಯಾಲಯ ಜಾಮೀನು ನೀಡಿದೆ…….
ವ್ಯಕ್ತಿ ಎಷ್ಟೇ ಕೆಟ್ಟವನಾದರು, ಜೈಲಿನಲ್ಲಿದ್ದರು ಜೀವವಿರುವಾಗ ಅನಾರೋಗ್ಯಕ್ಕೆ ಒಳಗಾಗಿ ನರಳುತ್ತಿರುವಾಗ ಆತನಿಗೆ ಚಿಕಿತ್ಸೆ ಕೊಡಬೇಕಾದದ್ದು ಮಾನವೀಯ ಧರ್ಮ, ಕಾನೂನಿನ ನಿಯಮ. ಅದು ದರ್ಶನ್ ಅವರಿಗೂ ಅನ್ವಯವಾಗಿದೆ. ತುಂಬಾ ಸಂತೋಷ. ಅವರು ಬೇಗ ಗುಣಮುಖರಾಗಲಿ……
ಹಾಗೆಯೇ ಎಷ್ಟೋ ಜೈಲಿನಲ್ಲಿರುವ ಆರೋಪಿಗಳು, ಅಪರಾಧಿಗಳು, ಖೈದಿಗಳಿಗೂ ಉತ್ತಮ ವಕೀಲರ ಸಹಾಯ ಇಲ್ಲದೆಯೂ ಇದೇ ನಿಯಮ ಅನುಷ್ಠಾನವಾಗಲಿ. ನ್ಯಾಯ ಕೇವಲ ಉಳ್ಳವರ ಪರವಾಗಿ ಅವರಿಗೆ ಅನುಕೂಲವಾಗುವಂತೆ ಕೊಳ್ಳುವ ಅಥವಾ ಮಾರಾಟವಾಗುವ ವಸ್ತುವಾಗಬಾರದು…….
ಸನ್ಮಾನ್ಯ ದರ್ಶನ್ ಅವರೇ, ರೇಣುಕಾ ಸ್ವಾಮಿ ಎಂಬ ವಿಕೃತ ಮನಸ್ಸಿನ ವ್ಯಕ್ತಿ ಒಬ್ಬ ಸಾಮಾನ್ಯ ಮನುಷ್ಯ. ನಿಮ್ಮ ತಂಡ ಅವನನ್ನು ಹಿಂಸಿಸುವಾಗ, ತನ್ನ ಪ್ರಾಣಭಿಕ್ಷೆಗಾಗಿ ಆತ ಕೈಮುಗಿದು ಕೇಳಿಕೊಳ್ಳುತ್ತಿರುವಾಗ, ಸುಮಾರು 45 ವರ್ಷದ ನೀವು, ಇಡೀ ಘಟನೆ ನಿಮ್ಮ ನಿಯಂತ್ರಣದಲ್ಲಿ ಇರುವಾಗ ಅವನನ್ನು ಕ್ಷಮಿಸಬಹುದಾದಷ್ಟು ಕನಿಷ್ಠ ಪ್ರಜ್ಞೆ, ಮಾನವೀಯತೆ ನಿಮ್ಮಲ್ಲಿ ಇರಬೇಕಾಗಿತ್ತು ಎನಿಸುತ್ತದೆ. ನಿಮಗೆ ಬೆನ್ನು ನೋವು ಅಷ್ಟು ಹಿಂಸಾತ್ಮಕವಾಗಿ ಕಾಡುತ್ತಿದ್ದರೆ ಅದೇ ಜೀವ ರೇಣುಕಾ ಸ್ವಾಮಿಗೆ ನಿಮ್ಮ ಹೊಡೆತಗಳು ಇನ್ನೆಷ್ಟು ನೋವು ತಂದಿರಬಹುದು. ನಿಮ್ಮದು ಸ್ವಾಭಾವಿಕ ನೋವು. ಆದರೆ ಅವರನ್ನು ನೀವು ಹಿಂಸಿದ್ದು ಉದ್ದೇಶಪೂರ್ವಕ ಹಿಂಸೆ. ಅವರ ತಪ್ಪಿಗೆ ನೀವು ಅವರನ್ನು ಕೊಂದಿದ್ದರೆ, ನೀವು ಅವರನ್ನು ಕೊಂದ ತಪ್ಪಿಗೆ ನಿಮಗೆ ಯಾವ ಶಿಕ್ಷಕ ನೀಡಬೇಕು ಸ್ವಲ್ಪ ಯೋಚಿಸಿ…..
ಅದು ಸಾಮಾನ್ಯ ತಿಳುವಳಿಕೆಗೆ ಅರ್ಥವಾಗಬೇಕು. ನಿಮ್ಮ ಗೆಳತಿ ಆಕಾಶದಿಂದ ಏನು ಇಳಿದು ಬಂದಿಲ್ಲ. ನೀವು ಸಹ ಬೇರೆ ಲೋಕದ ಜೀವಿಯೇನು ಅಲ್ಲ, ಸಾಮಾನ್ಯ ಮನುಷ್ಯರೇ. ಕೇವಲ ನಿಮ್ಮ ಗೆಳತಿಗೆ ಮಾತ್ರವಲ್ಲ, ಚಿಕ್ಕವಯಸ್ಸಿನಿಂದಲೂ ನಮ್ಮ ಅಕ್ಕತಂಗಿಯರಿಗೂ ಸಹ ಈ ರೀತಿಯ ಆದರೆ ಬೇರೆ ಬೇರೆ ರೂಪದ ಲೈಂಗಿಕ ದೌರ್ಜನ್ಯಗಳು ಆಗಲೂ ಈಗಲೂ ಈ ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ನಮಗೂ ಸಹ ಸಾಕಷ್ಟು ಕೋಪ ಬರುತ್ತದೆ. ಆದರೂ ಈ ವ್ಯವಸ್ಥೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಾನೂನಾತ್ಮಕ ಪ್ರತಿರೋಧ ತೋರಿಸಿ ಸುಮ್ಮನಾಗುತ್ತೇವೆ. ಏಕೆಂದರೆ ವ್ಯವಸ್ಥೆ ಇರುವುದೇ ಹಾಗೆ……
ಒಂದು ವೇಳೆ ನಾವು ಅವರನ್ನು ಕೊಂದರೆ ಅವರು ಮತ್ತೆ ನಮ್ಮನ್ನು ಕೊಲ್ಲುತ್ತಾರೆ. ಜೊತೆಗೆ ಇದರಿಂದ ಕುಟುಂಬಗಳ ತೊಂದರೆಗೆ ಒಳಗಾಗುತ್ತವೆ. ಏಕೆಂದರೆ ನಾವು ಜನಪ್ರಿಯರಲ್ಲ, ಹಣವಂತರಲ್ಲ, ಅಧಿಕಾರವಂತರಲ್ಲ. ನೀವು ಕೂಡ ಹಾಗೇ ಮೇಲೆ ಬಂದವರು. ಅದರಲ್ಲೂ ನಿಮ್ಮ ಜನಪ್ರಿಯತೆ ನಿಮ್ಮ ಕೊಲೆ ಆರೋಪದ ನಂತರವೂ ನಿಮ್ಮನ್ನು ಆರಾಧಿಸುವ ಅಭಿಮಾನಿ ವರ್ಗ ಇರುವಾಗ, ನಿಮ್ಮ ಬಳಿ ಸಾಕಷ್ಟು ಹಣ ಇರುವಾಗ, ನೀವು ಇನ್ನಷ್ಟು ಸೂಕ್ಷ್ಮವಾಗಿ, ಜವಾಬ್ದಾರಿಯಿಂದ ಸಹನೆಯಿಂದ ವರ್ತಿಸಬೇಕಿತ್ತು……
ಅದಕ್ಕಾಗಿ ಎಷ್ಟು ಮಾನವೀಯತೆ ಬೆಳೆಸಿಕೊಳ್ಳಬೇಕು ಎನ್ನುವ ಕನಿಷ್ಠ ಪ್ರಜ್ಞೆಯು ನಿಮಗಿಲ್ಲವಾಯಿತು. ಹೋಗಲಿ ಬಿಡಿ ಆಗಿದ್ದು ಆಗಿ ಹೋಯಿತು. ಇನ್ನಾದರೂ ಸಂಪೂರ್ಣ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಿ. ಒಂದಷ್ಟು ಹಣವನ್ನು ರೇಣುಕಾ ಸ್ವಾಮಿ ಪತ್ನಿಗೆ ಕೊಟ್ಟುಬಿಡಿ, ಅವರು ಕುಟುಂಬದ ಯೋಗಕ್ಷೇಮ ವಿಚಾರಿಸಿ, ಯಾವುದೇ ಪ್ರಚಾರ ಬಯಸದೆ……
ಇನ್ನು ಮುಂದೆ ಕನ್ನಡ ಭಾಷೆಗೆ, ಕನ್ನಡ ಸಿನಿಮಾಗೆ, ಕನ್ನಡ ಜನರಿಗಾಗಿ ನಿಮ್ಮ ಜನಪ್ರಿಯತೆಯನ್ನು ಉಪಯೋಗಿಸಿ. ಈ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ. ಒಳ್ಳೆಯಾ ಸಿನಿಮಾದಲ್ಲಿ ನಟಿಸಿ ಸಮಾಜಕ್ಕೆ ಒಬ್ಬ ಮಾದರಿ ವ್ಯಕ್ತಿಯಾಗಿ ತೋರಿಸಿ. ರೇಣುಕಾ ಸ್ವಾಮಿಯ ಸಾವು ಕೂಡ ಒಂದು ಸಾಮಾಜಿಕ ಪರಿವರ್ತನೆಗೆ ಹುತಾತ್ಮನಾಗಲು ಕಾರಣವಾಯಿತು ಎನ್ನುವ ಅಭಿಪ್ರಾಯ ಮೂಡಲು ಪ್ರಯತ್ನಿಸಿ…….
ನಿಮ್ಮನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದು ಯಾವುದೋ ದೈವಿಕ ಶಕ್ತಿಯೂ ಅಲ್ಲ ಅಥವಾ ಇನ್ಯಾವುದೋ ನೀವು ಮಾಡಿರುವ ಪುಣ್ಯಕಾರ್ಯವೂ ಅಲ್ಲ. ನಿಮ್ಮನ್ನು ಬಿಡುಗಡೆ ಮಾಡಿರುವುದು ನಿಮ್ಮ ಹಣ, ನಿಮ್ಮ ವಕೀಲರು, ಈ ದೇಶದ ಮಾನವೀಯ ಸಂವಿಧಾನ. ಅದು ನಿಮಗೆ ನೆನಪಿರಲಿ. ಯಾವ ದೇವರೂ ಒಬ್ಬ ಕೊಲೆಗಾರನನ್ನು ಬಿಡುಗಡೆ ಮಾಡುವುದಿಲ್ಲ. ಮಾಡಿದರೆ ಅದು ದೇವರಾಗುವುದೇ ಇಲ್ಲ. ಆ ಮೂಢನಂಬಿಕೆ ಬಲಿಯಾಗಬೇಡಿ……
ಹಾಗೆಯೇ ಮಾಧ್ಯಮಗಳೇ, ನಿಮ್ಮ ಅತಿರೇಕದ ವರ್ತನೆ ನಿಲ್ಲಿಸಿ. ಒಬ್ಬ ಆರೋಪಿಯನ್ನು ಈ ರೀತಿ ವಿಜೃಂಭಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಆತನನ್ನು ನಿರ್ಲಕ್ಷಿಸಿ ಮತ್ತು ಮನ: ಪರಿವರ್ತನೆಗೆ ಅವಕಾಶ ಕೊಡಿ. ಜೊತೆಗೆ ಅಂಧಾಭಿಮಾನಿಗಳೇ, ದಯವಿಟ್ಟು ಪಟಾಕಿ ಸಿಡಿಸಿ ಸಂಭ್ರಮಿಸುವುದು ನಿಮ್ಮ ವಿಕೃತ ಮನಸ್ಥಿತಿಯ ಪ್ರತೀಕ. ನಿಮಗೂ ರೇಣುಕಾ ಸ್ವಾಮಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಏಕೆಂದರೆ ಕೊಲೆಗಾರನ ಬಿಡುಗಡೆ ಸಂಭ್ರಮಿಸುವ ವಿಷಯವಲ್ಲ. ಒಂದಷ್ಟು ಸಾಮಾಜಿಕ ಜವಾಬ್ದಾರಿ ನಿಮಗಿರಲಿ…..
ಈ ಘಟನೆಗಳು ನಮಗೆ ಒಂದು ಪಾಠವಾಗಬೇಕು. ನಮ್ಮ ಬದುಕಿನ ಮುಂದಿನ ಅಧ್ಯಾಯಕ್ಕೆ ಒಳ್ಳೆಯ ಮುನ್ನುಡಿಯಾಗಬೇಕು…..
ಲೇಖನ-ವಿವೇಕಾನಂದ. ಎಚ್. ಕೆ. 9844013068………