ಜಾತಿ ಕಾಲಂ ನಲ್ಲಿ ಕುಂಚಿಟಿಗ ಎಂದು ಬರೆಸಿ- ಸಿ. ವಿ. ಲಕ್ಷ್ಮೀಪತಯ್ಯ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯ ಸರ್ಕಾರದ ವತಿಯಿಂದ ಇದೇ ತಿಂಗಳ
22 ರಿಂದ ನಡೆಯಲಿರುವ ಜಾತಿ ಸಮೀಕ್ಷೆಯಲ್ಲಿ ಕುಂಚಿಟಿಗ ಸಮುದಾಯದ ಎಲ್ಲಾ ಬಂಧುಗಳು ಜಾತಿ ಕಾಲಂ ನಲ್ಲಿ ಕುಂಚಿಟಿಗ ಎಂದು ಬರೆಸುವ ಮೂಲಕ ಸಮುದಾಯದ ಅಭಿವೃದ್ದಿಗೆ ಸಹಕರಿಸಬೇಕು ಎಂದು ತಾಲ್ಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಸಿ.ವಿ. ಲಕ್ಷ್ಮೀಪತಯ್ಯ ಮನವಿ ಮಾಡಿದರು. 

ನಗರದ ತಾಲ್ಲೂಕು ಕುಂಚಿಟಿಗರ ಸಂಘ ಮತ್ತು ತಾಲ್ಲೂಕು ಕುಂಚಿಟಿಗರ ಯುವ ಘಟಕದ ವತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ಸ್ವತಂತ್ರ ಜಾತಿಯಾಗಿ ಗುರುತಿಸಿಕೊಂಡಿರುವ ಕುಂಚಿಟಿಗ ಸಮುದಾಯವನ್ನು ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸಲಾಗುತ್ತಿದೆ.

- Advertisement - 

ಈಗಾಗಲೇ ಹಲವಾರು ಭಾಗಗಳಲ್ಲಿ ಕುಂಚಿಟಿಗ ಜಾತಿಯನ್ನು ಇತರೆ ಸಮುದಾಯಕ್ಕೆ ಸೇರಿಸಿ ನಮೂದಿಸಲಾಗುತ್ತಿದೆ. ನಮ್ಮದು ಪ್ರತ್ಯೇಕ ಜಾತಿ ಎಂದು ಸ್ಪಷ್ಟವಾಗಿ ತಿಳಿಸಲು ಈ ಸಮೀಕ್ಷೆ ಸಹಕರಿಯಾಗಲಿದೆ. ಇದೊಂದು ಉತ್ತಮ ಅವಕಾಶ ಹಾಗಾಗಿ ಕುಂಚಿಟಿಗ ಸಮುದಾಯದ ಜನತೆ ಸಮೀಕ್ಷೆ ಸಮಯದಲ್ಲಿ ಗಣತಿದಾರರಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಸಮುದಾಯಕ್ಕೆ ದಕ್ಕಬೇಕಿರುವ ಸೌಲಭ್ಯ ಹಾಗೂ ಹಕ್ಕುಗಳನ್ನು ಪಡೆಯಲು ಸಹಕರಿಸಬೇಕು ಎಂದರು.

ತಾಲ್ಲೂಕಿನಲ್ಲಿ 25 ಸಾವಿರಕ್ಕೂ ಅಧಿಕ ಮತದಾರರಿದ್ದು, 35ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದೇವೆ. ನಮ್ಮ ಸಮುದಾಯದ ವತಿಯಿಂದ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ನಮ್ಮ ಸಮುದಾಯ ಹಿಂದುಳಿದ ವರ್ಗಗಳ ಗುಂಪಿಗೆ ಪ್ರತ್ಯೇಕವಾಗಿ ಸೇರ್ಪಡೆಗೊಂಡು ಅಧಿಕೃತ ಘೋಷಣೆ ಹೊರಬೀಳಲಿದೆ ಎಂದರು.

- Advertisement - 

ಸಂಘದ ಕಾರ್ಯಾಧ್ಯಕ್ಷ ಆರ್. ಕೆಂಪರಾಜು ಮಾತನಾಡಿ ಇಂದಿಗೂ ನಮ್ಮ ಸಮುದಾಯ ಇತರೆ ಸಮುದಾಯಗಳೊಂದಿಗೆ ಗುರುತಿಸಿಕೊಳ್ಳುತ್ತಿದೆ. ನಮ್ಮ ಸಮುದಾಯದ ಗುರುಗಳಾದ ಶ್ರೀ ಹನುಮಂತ ನಾಥ ಸ್ವಾಮೀಜಿ ತಿಳಿಸಿರುವಂತೆ ಜಾತಿ ಸಮೀಕ್ಷೆ ಸಮಯದಲ್ಲಿ ಮಾಹಿತಿ ನೀಡುವಾಗ ರಾಷ್ಟ್ರೀಯತೆ ಭಾರತೀಯ ಎಂದು ಧರ್ಮ ಹಿಂದೂ, ತಮ್ಮ ಜಾತಿ ಕಾಲಂನಲ್ಲಿ ಕುಂಚಿಟಿಗ ಎಂದು ಅದರ ಕೋಡ್ A/0795ನಲ್ಲಿ ಕಡ್ಡಾಯವಾಗಿ ನಮೂದಿಸಬೇಕಾಗಿ ವಿನಂತಿ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕುಂಚಿಟಿಗ ಸಂಘದ ಗೌರವಾಧ್ಯಕ್ಷ ವಿ. ಅಂಜಿನಪ್ಪ, ಉಪಾಧ್ಯಕ್ಷ ಚಿಕ್ಕತಿಮ್ಮಯ್ಯ, ಖಜಾಂಚಿ ಆರ್. ಶ್ರೀನಿವಾಸ್ ನಿರ್ದೇಶಕರುಗಳಾದ ಮಂಜುನಾಥ್, ಗೋವಿಂದ ರಾಜು, ಮಾಜಿ ಅಧ್ಯಕ್ಷ ರಾಮಯ್ಯ, ಪ್ರಧಾನ ಕಾರ್ಯದರ್ಶಿ ಮುತ್ತುರಾಜ್, ತಾಲೂಕು ಯುವ ಘಟಕದ ಅಧ್ಯಕ್ಷ ಎಲ್. ವಿ. ವೆಂಕಟರಾಮು, ಕಾರ್ಯಧ್ಯಕ್ಷ ಶಿವಕುಮಾರ್ ಎ. ಹಾಗೂ  ಪದಾಧಿಕಾರಿಗಳು ಹಾಜರಿದ್ದರು.

 

 

 

Share This Article
error: Content is protected !!
";