ಸಿಲಿಂಡರ್​ ಸ್ಫೋಟ, ಇಬ್ಬರು ಗಂಭೀರ, ಮನೆಗಳು ಛಿದ್ರ

News Desk

ಚಂದ್ರವಳ್ಳಿ ನ್ಯೂಸ್, ಆನೇಕಲ್(ಬೆಂಗಳೂರು):
ಎಲ್​ಪಿಜಿ ಸಿಲಿಂಡರ್​ ಸ್ಫೋಟಗೊಂಡು ಭಾರಿ ಅನಾಹುತ ಸಂಭವಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್​ ತಾಲೂಕಿನಲ್ಲಿ ನಡೆದಿದೆ. ಕಿತ್ತಗಾನಹಳ್ಳಿ-ಚಂದಾಪುರ ಬಳಿಯ ಜಯನಗರ ಸುನಿಲ್ ಎಂಬುವರ ಬಾಡಿಗೆ ಮನೆಯಲ್ಲಿ ಸೋಮವಾರ ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸಿಡಿದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ
, ಅಕ್ಕಪಕ್ಕದ ಮನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ.

ಬೊಮ್ಮಸಂದ್ರ ಪುರಸಭಾ ವ್ಯಾಪ್ತಿಯ ಮೊದಲ ಅಂತಸ್ತಿನ ಮಹಡಿಯಲ್ಲಿ ಈ ದುರ್ಘಟನೆ ನಡೆದಿದ್ದು ಇಬ್ಬರಿಗೆ ಮೈಕೈ ಸುಟ್ಟು ಗಂಭೀರ ಗಾಯಗಳಾಗಿವೆ. ಸಂತ್ರಸ್ತ ಗಾಯಾಳುಗಳನ್ನು ಕೇರಳ ಮೂಲದ ಸುನಿಲ್‌ಜೋಸೆಫ್ ಹಾಗು ತಮಿಳುನಾಡು ಮೂಲದ ವಿಷ್ಣು ಜಯರಾಮ್ ಎಂದು ಗುರುತಿಸಲಾಗಿದೆ. ಮನೆಯಲ್ಲಿದ್ದ ಈ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳು ನಾರಾಯಣ ಹೆಲ್ತ್ ಸಿಟಿಯಲ್ಲಿ‌ಕೆಲಸ‌ಮಾಡುತ್ತಿದ್ದರೆಂದು ತಿಳಿದುಬಂದಿದೆ.

ಸಿಲಿಂಡರ್ ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ನಾಲ್ಕೈದು ಮನೆಗಳಿಗೆ ಹಾನಿಯಾಗಿದ್ದು, ವಾಟರ್ ಲೈನ್, ಕಿಟಕಿ, ಬಾಗಿಲುಗಳೆಲ್ಲ ಪೀಸ್ ಪೀಸ್ ಆಗಿವೆ. ಜೊತೆಗೆ ಸ್ಫೋಟದ ವೇಳೆ ಮನೆಯ ಗೋಡೆಗಳು ಕುಸಿದಿದ್ದು, ಮನೆ ಬಳಿಯ ವಾಹನಗಳು ಕೂಡ ಜಖಂ ಆಗಿವೆ.

ಈ ಘಟನೆಗೆ ಸಂಬಂಧಪಟ್ಟಂತೆ ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬೆಳಗ್ಗೆ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು, ಬೊಮ್ಮಸಂದ್ರ ಪುರಸಭೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ದೌಡಾಯಿಸಿದ್ದಾರೆ. ಕೂಡಲೇ ಇಬ್ಬರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

- Advertisement -  - Advertisement - 
Share This Article
error: Content is protected !!
";