ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಾಜ್ಯದಲ್ಲಿ ಗುತ್ತಿಗೆದಾರರಿಗೆ ಅನೇಕ ಸಮಸ್ಯೆಗಳಿದೆ. ಎಲ್ಲವನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಚಿತ್ರದುರ್ಗದ ಆರ್.ಮಂಜುನಾಥ್‌ಗೆ ಜಿಲ್ಲಾ ಗುತ್ತಿಗೆದಾರರ ಸಂಘದಿಂದ ಎಸ್.ಜಿ. ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಎರಡು ಲಕ್ಷ ಕೋಟಿ ರೂ.ಗಳ ಬಿಲ್ ಬಾಕಿ ಉಳಿಸಿಕೊಂಡಿರುವುದರಿಂದ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಈಗಿರುವ ನಮ್ಮ ಸರ್ಕಾರ ಹಂತ ಹಂತವಾಗಿ ಗುತ್ತಿಗೆದಾರರ ಬಿಲ್ ಪಾವತಿಸುತ್ತಿದೆ. ರಾಜ್ಯಾದ್ಯಂತ ಗುತ್ತಿಗೆದಾರರ ಹಿತ ಕಾಯುವತ್ತ ನೂತನ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ಗಮನ ಕೊಡಬೇಕೆಂದು ಸಚಿವರು ತಿಳಿಸಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ ಚಿತ್ರದುರ್ಗದ ಆರ್.ಮಂಜುನಾಥ್ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘಕ್ಕೆ ಆಯ್ಕೆಯಾಗಿರುವುದು ಒಂದು ಸಾಧನೆ. ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ. ಗುತ್ತಿಗೆದಾರರ ಸಮಸ್ಯೆಗಳಿಗೆ ಮೊದಲಿನಿಂದಲೂ ಸ್ಪಂದಿಸುತ್ತಿರುವ ಆರ್.ಮಂಜುನಾಥ್ ರಾಜ್ಯದಲ್ಲಿರುವ ಗುತ್ತಿಗೆದಾರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಬಿಜೆಪಿ. ನಿರ್ಧಾರಗಳು ಗುತ್ತಿಗೆದಾರರಿಗೆ ಪೂರಕವಾಗಿಲ್ಲ. ಅದು ಈಗ ನಮ್ಮ ಸರ್ಕಾರದ ಮಲೆ ಹೊರೆಯಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗುತ್ತಿಗೆದಾರರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ದೊಡ್ಡ ಗುತ್ತಿಗೆದಾರ, ಸಣ್ಣ ಗುತ್ತಿಗೆದಾರ ಎನ್ನುವ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಒಂದೊಂದು ರೀತಿಯ ತೊಂದರೆಗಳಿದೆ. ಸಾಮಾಜಿಕ ನ್ಯಾಯ ನೀಡುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಆರ್.ಮಂಜುನಾಥ್‌ಗೆ ಗುತ್ತಿಗೆದಾರರ ಸಮಸ್ಯೆಗಳನ್ನು ಬಗೆಹರಿಸುವ ಜವಾಬ್ದಾರಿ ಸಿಕ್ಕಿರುವುದು ಸಂತೋಷದ ಸಂಗತಿ. ರಾಜ್ಯಾದ್ಯಂತ ಗುತ್ತಿಗೆದಾರರ ಹಿತ ಕಾಪಾಡುವತ್ತ ಗಮನ ಕೊಡಬೇಕು. ದೊಡ್ಡ ಗುತ್ತಿಗೆದಾರರಿಗೆ ಸಮಸ್ಯೆಯಿಲ್ಲ. ಮಧ್ಯಮ ಮತ್ತು ಸಣ್ಣ ಗುತ್ತಿಗೆದಾರರು ತೊಂದರೆಯಲ್ಲಿದ್ದಾರೆ. ಅವರ ಪರವಾಗಿ ಗುತ್ತಿಗೆದಾರರ ಸಂಘದ ನೂತನ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ನಿಲ್ಲಬೇಕು. ಮಂತ್ರಿಗಳು, ಶಾಸಕರುಗಳಿಂದ ಗುತ್ತಿಗೆದಾರರಿಗೆ ತೊಂದರೆಯಾಗುತ್ತಿಲ್ಲ. ಅಧಿಕಾರಿಗಳಿಂದ ಕಿರುಕುಳ ಅನುಭವಿಸುವಂತಾದಾಗ ಧ್ವನಿ ಎತ್ತಬೇಕು. ಸರ್ಕಾರಗಳು ಯಾವುದೇ ಬರಬಹುದು, ಹೋಗಬಹುದು. ಗುತ್ತಿಗೆದಾರರು ಮಾತ್ರ ನಿರಂತರವಾಗಿರುತ್ತಾರೆ ಎಂದು ಹೇಳಿದರು.
ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಇಲ್ಲಿಯವರೆಗೂ ಬೆಂಗಳೂರು ನಗರದವರೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘಕ್ಕೆ ಅಧ್ಯಕ್ಷರಾಗುತ್ತಿದ್ದರು. ಈಗ ಚಿತ್ರದುರ್ಗದ ಆರ್.ಮಂಜುನಾಥ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾಗಿರುವುದು ಜಿಲ್ಲೆಗೆ ಸಂದ ಗೌರವ. ಶಿಸ್ತು, ನೇರ ನಡೆ ನುಡಿಯ ಮನುಷ್ಯ ಆರ್.ಮಂಜುನಾಥ್ ವಿಧಾನಸಭೆ ಚುನಾವಣೆಯಲ್ಲಿ ನನ್ನ ಪರವಾಗಿ ನಿಂತು ಕೆಲಸ ಮಾಡಿದ್ದರಿಂದ ಗೆಲ್ಲಲು ಸಾಧ್ಯವಾಯಿತು. ಸಲಹೆ ಸೂಚನೆಗಳನ್ನು ಕೊಡುವುದರ ಜೊತೆಗೆ ತಪ್ಪು ಹೆಜ್ಜೆ ಇಟ್ಟಾಗ ಸರಿಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರ ಸಮಸ್ಯೆಳಿಗೆ ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ನಾನು ರಾಜ್ಯಾಧ್ಯಕ್ಷನಾಗಲು ಜಿಲ್ಲಾ ಗುತ್ತಿಗೆದಾರರ ಸಂಘದ ಪರಿಶ್ರಮವಿದೆ. ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಮೂರ್‍ನಾಲ್ಕು ವರ್ಷಗಳಿಂದ ಬಿಲ್ ಬಾಕಿ ಉಳಿದಿದೆ. ಜಿ.ಎಸ್.ಟಿ.ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ ಹೊರ ರಾಜ್ಯಗಳಿಂದ ಗುತ್ತಿಗೆದಾರರು ಬಂದು ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿಯೇ ಗುಣಮಟ್ಟದ ಕೆಲಸ ಮಾಡುವ ಗುತ್ತಿಗೆದಾರರುಗಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯದ ಮುಖ್ಯಮಂತ್ರಿ ಜೊತೆ ಗುತ್ತಿಗೆದಾರ ಸಭೆ ಕರೆದು ಸಮಸ್ಯೆಗಳನ್ನು ಕೇಳಿ ಟೆಂಡರ್ ಹಾಕಲು ಅವಕಾಶ ಕಲ್ಪಿಸಿಕೊಡಲಿ ಎಂದು ಮನವಿ ಮಾಡಿದರು.
ಹೊಳಲ್ಕೆರೆ ತಾಲ್ಲೂಕಿನಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಅವಕಾಶ ಸಿಗಬೇಕು. ಗುತ್ತಿಗೆದಾರರು ಮರಣ ಹೊಂದಿದರೆ ಐದು ಲಕ್ಷ ರೂ.ಗಳನ್ನು ನೀಡಲಾಗುತ್ತಿತ್ತು. ಈಗ ಹತ್ತು ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಜಿ.ಎಸ್.ಟಿ. ವ್ಯಾಟ್ ಸಮಸ್ಯೆಯಿದೆ. ಗುತ್ತಿಗೆದಾರರ ಲೈಸೆನ್ಸ್ ನವೀಕರಣ ಅವಧಿಯನ್ನು ಹತ್ತು ವರ್ಷಗಳಿಗೆ ಮಿತಿಗೊಳಿಸಲಾಗಿದೆ.
ಸಣ್ಣ ಸಣ್ಣ ಗುತ್ತಿಗೆದಾರರ ಪರ ಕೆಲಸ ಮಾಡುತ್ತೇನೆ. ಯಾರು ಭಯ ಪಡುವ ಅವಶ್ಯಕತೆಯಿಲ್ಲ. ಮೂವತ್ತು ಸಾವಿರ ಕೋಟಿ ರೂ. ಬಿಲ್ ಬಾಕಿಯಿದೆ. ಅದರಲ್ಲಿ ಹದಿನೈದು ಸಾವಿರ ಕೋಟಿ ರೂ.ಗಳನ್ನು ಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ಕೊಟ್ಟಿದ್ದಾರೆ. ಕೆಲವು ಸಮಸ್ಯೆಗಳನ್ನು ಹೇಳಿಕೊಳ್ಳಲು ಆಗುವುದಿಲ್ಲ. ನನಗೆ ಸಿಕ್ಕಿರುವ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಚಿತ್ರದುರ್ಗ ಜಿಲ್ಲೆಗೆ ಕೆಟ್ಟ ಹೆಸರು ತರುವುದಿಲ್ಲವೆಂದು ಆಶ್ವಾಸನೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಕೆ.ಡಿ.ಪಿ. ಸದಸ್ಯ ಕೆ.ಸಿ.ನಾಗರಾಜ್ ಇವರುಗಳು ಮಾತನಾಡಿದರು.
ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಮಲ್ಲೇಶಪ್ಪ, ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯ ನಿರ್ದೇಶಕ ಮಲ್ಲಪ್ಪನಹಳ್ಳಿ ಹೇಮಂತ್ ಕುಮಾರ್, ಗುತ್ತಿಗೆದಾರರಾದ ಹಿರಿಯೂರು ನಾರಾಯಣರೆಡ್ಡಿ, ಮೈಲಾರಪ್ಪ, ಈರಲಿಂಗೇಗೌಡ, ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಕೆ.ಅನ್ವರ್‌ಪಾಷ ಸೇರಿದಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಕೆ.ಆರ್.ಮಂಜುನಾಥ್‌ರವರ ಅಪಾರ ಅಭಿಮಾನಿಗಳು ಅಭಿನಂದನಾ ಸಮಾರಂಭದಲ್ಲಿ ಹಾಜರಿದ್ದರು.