ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಕ್ಷಿಣ ಭಾರತದ ಹವಾಚಕ್ರ ತಯಾರಿಕೆಯ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳುತ್ತಿದೆ ಡಾಬಸ್‌ಪೇಟೆ! ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
KKWindSolutions ಡೆನ್ಮಾರ್ಕ್ ಮೂಲದ ಸಂಸ್ಥೆಯಾಗಿದ್ದು, ಗಾಳಿ ಯಂತ್ರಗಳ ನಿಯಂತ್ರಣ ವ್ಯವಸ್ಥೆಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಕಂಪೆನಿಯು ಪ್ಲಾಟ್ಫಾರ್ಮ್ಗಳು, ಪ್ಯಾನಲ್ಗಳು ಮತ್ತು ಪವನ್ ವಿದ್ಯುತ್ ಪರಿಕರಗಳ ಎಲೆಕ್ಟ್ರಾನಿಕ್ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿದೆ.
ನಮ್ಮ ಡೆನ್ಮಾರ್ಕ್ ಪ್ರವಾಸದ ವೇಳೆ ಸಂಸ್ಥೆಗೆ ಭೇಟಿ ನೀಡಿ ಮಾತುಕತೆ ನಡೆಸಿದೆವು ಎಂದು ಸಚಿವ ಪಾಟೀಲ್ ತಿಳಿಸಿದರು.
KKWind Solutions ಸಂಸ್ಥೆಯು, ಬೆಂಗಳೂರು ಯಶವಂತಪುರ ಹಾಗೂ ಚೆನ್ನೈನ ತಯಾರಿಕಾ ಘಟಕಗಳನ್ನು ಕರ್ನಾಟಕದ ಡಾಬಸ್ ಪೇಟೆಯಲ್ಲಿರುವ ಘಟಕದಲ್ಲಿ ಏಕೀಕರಿಸುತ್ತಿದೆ. ಈ ಘಟಕದಲ್ಲಿ ಈಗಾಗಲೇ ನಿಯಂತ್ರಣ ಪ್ಲಾಟ್ ಫಾರ್ಮ್ ಗಳು ಮತ್ತು ಕನ್‌ವರ್ಟರ್ ಗಳನ್ನು ಉತ್ಪಾದಿಸಲಾಗುತ್ತಿದೆ.
ಅವರ ಈ ವಿನೂತನ ಯೋಜನೆಗೆ ಸರ್ಕಾರದ ಸಂಪೂರ್ಣ ಬೆಂಬಲ ಹಾಗೂ ಮುಂದಿನ ಹೂಡಿಕೆಗಳಿಗೆ ಭರವಸೆ ನೀಡಲಾಯಿತು. ಇಲೆಕ್ಟ್ರಾನಿಕ್ಸ್ ಮತ್ತು ಪ್ಲಾಟ್ ಫಾರ್ಮ್ ವ್ಯವಸ್ಥೆಗಳ ಕ್ಷೇತ್ರದಲ್ಲಿ ವಿಸ್ತರಣೆಗೆ ಪ್ರೋತ್ಸಾಹಿಸಲಾಯಿತು ಎಂದು ಸಚಿವರು ತಿಳಿಸಿದರು.
ಬೆಂಗಳೂರು ಸುತ್ತಮುತ್ತ ಪೂರೈಕೆ ಸರಪಳಿ ವ್ಯವಸ್ಥೆಯನ್ನು ಸ್ಥಳೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆ ನಡೆಯಿತು. ಇದುವರೆಗೆ ದೊರೆತ ಬೆಂಬಲಕ್ಕಾಗಿ ಸಂಸ್ಥೆಯು ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿತು ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.

