ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಷ್ಟಪಟ್ಟು ದುಡಿಯುವ ಕಾರ್ಮಿಕರಿಗೆ ಪ್ರತಿಯೊಬ್ಬರು ಗೌರವ ನೀಡಬೇಕು ಎಂದು ಸಹಾಯ ರೂರಲ್ ಅಂಡ್ ಅರ್ಬನ್ ಡೆವಲಪ್ಮೆಂಟ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ಜಿ.ದಾದಾಪೀರ್ ಹೇಳಿದರು.
ಅವರು ಗುರುವಾರ ಸಹಾಯ ಅರ್ಬನ್ ಅಂಡ್ ರೂರಲ್ ಡವಲಪ್ಮೆಂಟ್ ಸೊಸೈಟಿ, ವತಿಯಿಂದ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯ ನಿಮಿತ್ತ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಅಂಬೇಡ್ಕರ್ ಅವರು ಭಾರತಕ್ಕೆ ಸಮಾನತೆಯ ಸಂವಿಧಾನ ನೀಡಿದ್ದಲ್ಲದೆ ಕಾರ್ಮಿಕರ ಹಕ್ಕುಗಳನ್ನು ಬಲವಾಗಿ ಪ್ರತಿಪಾದಿಸಿದರು. 8 ಗಂಟೆಗಳ ಕೆಲಸದ ಕಾನೂನು, ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಮತ್ತು ಕಾರ್ಮಿಕ ಕಾನೂನುಗಳಂತಹ ಅನೇಕ ಐತಿಹಾಸಿಕ ಬದಲಾವಣೆಗಳು ಅವರ ಚಿಂತನೆ ಮತ್ತು ಹೋರಾಟದ ಫಲವಾಗಿದೆ ಎಂದರು.
ಇಂದು ನಾವು ಕಾರ್ಮಿಕ ದಿನವನ್ನು ಆಚರಿಸುತ್ತಿರುವಾಗ, ಪ್ರತಿಯೊಬ್ಬ ಕಾರ್ಮಿಕನನ್ನು ಗೌರವಾನ್ವಿತ ನಾಗರಿಕನೆಂದು ಪರಿಗಣಿಸುವ ಆ ಚಿಂತನೆಗೆ ನಮನ ಹೇಳಬೇಕಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಕೋಟ್ಯಾನುಕೋಟಿ ಕಾರ್ಮಿಕರ, ನೌಕರರ ಕಣ್ಮಣಿಯಾಗಿ ಕಾರ್ಮಿಕರ ಜೀವನೋದ್ದಾರಕ್ಕಾಗಿ ತಮ್ಮ ಬದುಕನ್ನೇ ಮೀಸಲಿಟ್ಟು ಕಾರ್ಮಿಕ ಕಾನೂನುಗಳನ್ನು ಕಾರ್ಮಿಕ ಸಮುದಾಯವೇ ಅರಿಯದಿರುವುದು ದೊಡ್ಡ ದುರಂತ ಎಂದು ದಾದಾಪೀರ್ ಹೇಳಿದರು.
ಕಾರ್ಮಿಕರಿಗೆ 8 ಗಂಟೆಯ ದುಡಿಮೆ, ನಿಗದಿತ ಸಂಬಳ, ಅಧಿಕ ದುಡಿಮೆಗೆ OT, ಸಂಬಳ ಸಹಿತ ರಜೆ, ಮಹಿಳಾ ಕಾರ್ಮಿಕರಿಗೂ ಸಮಾನ ವೇತನ, ಹೆರಿಗೆ ಭತ್ಯ, ಸಂಬಳ ಸಹಿತ ಹೆರಿಗೆ ರಜಾ, ಇ.ಎಸ್.ಐ, ಪಿ.ಎಫ್, ಕಾರ್ಮಿಕರ ಕಲ್ಯಾಣ ನಿಧಿ, ಕಾರ್ಮಿಕರಿಗಾಗಿ ವಿಶೇಷ ಆಸ್ಪತ್ರೆ, ವಿಶೇಷ ಭತ್ಯೆ, ಉದ್ಯೋಗ ಭದ್ರತೆ, ಉಚಿತ ವಿಮೆ, ಕಾರ್ಮಿಕ ಮಕ್ಕಳ ಕಲ್ಯಾಣ ನಿಧಿ ಹೀಗೆ ಬಾಬಾಸಾಹೇಬರು “ಕಾರ್ಮಿಕ ಸಚಿವರಾಗಿ” ಬಹುದೊಡ್ಡ ಕ್ರಾಂತಿಯನ್ನೇ ಮಾಡಿದರು.
ಇಂದು ಕೈಗಾರಿಕೆಗಳಲ್ಲಿ, ಸರ್ಕಾರಿ, ಅರೆಸರ್ಕಾರಿ, ಖಾಸಗಿ ಮತ್ತು ಕೃಷಿ ಹೀಗೆ ಯಾವುದೇ ಕ್ಷೇತ್ರದ ಉದ್ಯೋಗಿಗಳು ಆನಂದದಿಂದ ಅನುಭವಿಸುತ್ತಿರುವ ಎಲ್ಲಾ ಕೊಡುಗೆಗಳು ಬಾಬಾ ಸಾಹೇಬರ ಋಣ ಎಂಬುದನ್ನು ಮರೆಯಬಾರದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಅಪ್ಸರ್, ಮಾರುತಿರಾವ್ ಜಾಧವ್, ಸೈಯದ್ ನಾಸಿರುದ್ದೀನ್, ದಾದಾಪೀರ್, ಶಾಬುದ್ದೀನ್, ಇಮ್ರಾನ್ ಇನ್ನು ಹಲವು ಮುಖಂಡರು ಉಪಸ್ಥಿತಿ ಇದ್ದರು.