ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನಲ್ಲಿ ಜೆಡಿಎಸ್ ಅತ್ಯಂತ ಪ್ರಬಲವಾಗಿದೆ. ಮೇಲಾಗಿ ತಾಲೂಕಿನಲ್ಲಿ ಅತಿ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳು ದಳ ಬೆಂಬಲಿತರ ತೆಕ್ಕೆಯಲ್ಲಿವೆ. ಹಾಗಾಗಿ ಮುಂಬರುವ ಬಮುಲ್ ನಿರ್ದೇಶಕರ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಲು ಸಿದ್ದವಾಗಿದೆ ಎಂದು ಜೆಡಿಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಹುಸ್ಕೂರ್ ಆನಂದ್ ಹೇಳಿದ್ದಾರೆ.
ಮೇ 25ರಂದು ಬಮುಲ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಈ ಬಗ್ಗೆ ಬಮುಲ್ ಚುನಾವಣಾ ಆಕಾಂಕ್ಷಿ ಹುಸ್ಕೂರ್ ಆನಂದ್ ಪತ್ರಿಕೆಯೊಂದಿಗೆ ಮಾತನಾಡಿ ನಾನು ಬಮುಲ್ ನಿರ್ದೇಶಕರ ಸ್ಥಾನದ ಸ್ಪರ್ಧೆಗೆ ಆಕಾಂಕ್ಷಿಯಾಗಿದ್ದು ಇದರ ಬಗ್ಗೆ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೇಂದ್ರ ಮಂತ್ರಿ ಕುಮಾರ ಸ್ವಾಮಿಯವರೊಂದಿಗೆ ಸಮಾಲೋಚಿಸಿ ಅವರ ಆದೇಶದ ಮೇರೆಗೆ ನನ್ನ ಸ್ಪರ್ಧೆ ಖಚಿತ ಪಡಿಸುತ್ತೇನೆ.
ಈಗಾಗಲೇ ತಾವು ಅಭ್ಯರ್ಥಿಯಾದರೆ ಹಲವಾರು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳು ಬೆಂಬಲಕ್ಕೆ ನಿಲ್ಲುವುದಾಗಿ ಖಚಿತ ಪಡಿಸಿವೆ. ಹಾಗಾಗಿ ನಾನು ಸ್ಪರ್ದಿಸಲು ಚಿಂತನೆ ನಡೆಸಿದ್ದೇನೆ. ಕಳೆದ ಕೆಲವು ದಿನಗಳಿಂದ ಹಾಲಿ ಬಮುಲ್ ನಿರ್ದೇಶಕರು ಬಿಜೆಪಿ ದಳ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸುದ್ದಿ ಹರಡಿದ್ದು ಈ ಬಗ್ಗೆ ಖುದ್ದು ಶಾಸಕರೇ ಹೇಳಿದ್ದಾರೆ. ಆದರೆ ತಾಳಿಕಿನಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಸಂಘಗಳು ಕಡಿಮೆ ಇದೆ.
ತೂಬಗೆರೆ ಹೋಬಳಿ ಒಂದರಲ್ಲೇ ಜೆಡಿಎಸ್ ಬೆಂಬಲಿತರ ನಲವತ್ತು ಸಹಕಾರ ಸಂಘಗಳಿದ್ದು ತಾಲೂಕಿನಾದ್ಯಂತ ಜೆಡಿಎಸ್ ಹೆಚ್ಚಿನ ಸಂಖ್ಯೆಯಲ್ಲಿವೆ. ವಸ್ತು ಸ್ಥಿತಿ ಹೀಗಿರುವಾಗ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಯಲಿದೆ ಎಂಬ ಶಾಸಕರ ಹೇಳಿಕೆಯಲ್ಲಿ ಹುರುಳಿಲ್ಲ. ಮೇಲಾಗಿ ಈ ಬಗ್ಗೆ ನಮ್ಮ ಪಕ್ಷದಲ್ಲಿ ಚರ್ಚೆಗಳು ನಡೆದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ದಳ ಬಿಜೆಪಿ ಮೈತ್ರಿಯಾಗಿತ್ತು. ಆದರೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೈತ್ರಿ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಆನಂದ್ ಹುಸ್ಕೂರ್ ತಿಳಿಸಿದರು.
ಆನಂದ ಯಾರೆಂದು ನನಗೆ ಗೊತ್ತಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದೆರಡು ಬಾರಿ ಭೇಟಿಯಾಗಿದ್ದು ಬಿಟ್ಟರೆ ಅವರ ಪರಿಚಯವಿಲ್ಲ ಎನ್ನುತ್ತಿದ್ದ ಶಾಸಕರು ಇದ್ದಕ್ಕಿದ್ದಂತೆ ನಾನು ಜೆಡಿಎಸ್ ವರಿಷ್ಟರೊಂದಿಗೆ ಮಾತನಾಡಿ ಹುಸ್ಕೂರ್ ಆನಂದ್ ರವರ ಬೆಂಬಲದೊಂದಿಗೆ ಹಾಲಿ ನಿರ್ದೇಶಕ ಬಿ. ಸಿ. ಆನಂದ್ ರವರನ್ನು ಕಣಕ್ಕಿಳಿಸುವುದಾಗಿ ಹೇಳಿರುವುದು ಆಶ್ಚರ್ಯ ಉಂಟು ಮಾಡಿದೆ.
ಈಗಾಗಲೇ ಮೂರು ಪಕ್ಷಗಳಲ್ಲಿ ಸುಮಾರು ಎಂಟರಿಂದ ಹತ್ತು ಜನ ಸ್ಪರ್ದಿಸಲು ಆಕಾಂಕ್ಷಿ ಗಳಿದ್ದಾರೆ. ನನ್ನ ಉದ್ದೇಶ ಯಾರಾದರೂ ಆಗಲಿ ಅರ್ಹ ಆಕಾಂಕ್ಷಿ ಅವಿರೋಧವಾಗಿ ಆಯ್ಕೆಯಾಗುವುದಾದರೆ ನನ್ನ ಸಹಮತವಿದೆ. ಈ ಬಗ್ಗೆ ಹಲವು ಪ್ರಯತ್ನಗಳು ನಡೆಯುತ್ತಿವೆ. ಮುಂಬರುವ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗುತ್ತದೆ.
ಅಲ್ಲಿಯವರೆಗೂ ಕಾಯೋಣ. ಒಂದು ವೇಳೆ ಅದಾಗದಿದ್ದರೆ ನೇರ ಸ್ಪರ್ಧೆ ಖಚಿತ. ಒಂದು ವೇಳೆ ಮೈತ್ರಿಯಾಗಿ ದಳಕ್ಕೆ ಸ್ಥಾನ ಬಿಟ್ಟು ಕೊಟ್ಟರೆ ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಇಲ್ಲದಿದ್ದರೆ ನಮ್ಮ ಪಕ್ಷ ಸ್ಪರ್ಧೆಗೆ ಸಿದ್ದವಿದೆ. ಪಕ್ಷದ ವರಿಷ್ಠರ ಸೂಚನೆಗೆ ಕಾಯುತ್ತಿದ್ದೇವೆ. ಸೂಚನೆ ಸಿಕ್ಕ ನಂತರ ನನ್ನ ನಿರ್ಧಾರ ಪ್ರಕಟಿಸುತ್ತೇನೆ. ಒಟ್ಟಾರೆ ಮೈತ್ರಿ ಸಾಧ್ಯತೆ ಕಡಿಮೆ ಎಂದು ಹುಸ್ಕೂರ್ ಆನಂದ್ ಹೇಳಿದರು.