ಚಂದ್ರವಳ್ಳಿ ನ್ಯೂಸ್, ತುಮಕೂರು:
ಗ್ರಾಮಸ್ಥನೊಬ್ಬ ದೇವರು ಬಂದಂತೆ ನಾಟಕವಾಡಿ ದಲಿತ ನವದಂಪತಿಗಳನ್ನು ದೇವಾಲಯದಿಂದ ಹೊರಗೆ ಕಳಿಸಿರುವ ಘಟನೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ತವರಲ್ಲೇ ನಡೆದಿದೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಅರಸಮ್ಮ ದೇವಾಲಯದಲ್ಲಿ ಘಟನೆ ನಡೆದಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೊಸದಾಗಿ ಮದುವೆಯಾಗಿದ್ದ ದಲಿತ ಕುಟುಂಬದ ದಂಪತಿ ದೇವಾಲಯಕ್ಕೆ ಹೋಗಿದ್ದರು. ಈ ವೇಳೆ ದೇವಾಲಯದ ಒಳಗಿದ್ದ ವ್ಯಕ್ತಿಯೊಬ್ಬ ದಂಪತಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಬಳಿಕ ದೇವರು ಬಂದಂತೆ ನಟಿಸಿ ದಲಿತ ಕುಟುಂಬವನ್ನು ಹೊರಕಳಿಸಿದ್ದಾನೆ.
ದಲಿತರು ನಿಮಗೆ ಪ್ರವೇಶವಿಲ್ಲ, ಪುಣ್ಯ ಮಾಡಿಸಬೇಕು ಎಂದ ಗದರಿ ಹೊರಕಳಿಸಿದ್ದಾನೆ. ದೇವರು ಬಂದಂತೆ ನಟಿಸಿ ನಾಟಕವಾಡಿದ ಆರೋಪಿ ನಾರಾಯಣಪ್ಪ ಎಂದು ಗುರುತಿಸಲಾಗಿದ್ದು ನವದಂಪತಿಗೆ ‘ನಡೀ ಆಚೆಗೆ’ ಎಂದು ಗದರಿಸಿ ಅವಮಾನ ಮಾಡಿದ್ದಾನೆ ಎನ್ನಲಾಗಿದೆ.
ತಹಶೀಲ್ದಾರ್ ಮಧ್ಯೆ ಪ್ರವೇಶಿಸಿ ಬಳಿಕ ಗ್ರಾಮದಲ್ಲಿ ಆಯೋಜಿಸಿದ್ದ ಶಾಂತಿ ಸಭೆ ಯಶಸ್ವಿಯಾಗಿದೆ. ಜಾತಿಯ ವಿಷಬೀಜ ಬಿಡಿ, ಬಸವಣ್ಣನವರ ತತ್ವ ಪಾಲಿಸಿ ಸೌಹಾರ್ದತೆಯಿಂದ ಇರುವಂತೆ ಗ್ರಾಮಸ್ಥರಿಗೆ ತಹಶೀಲ್ದಾರ್ ಸಲಹೆ ನೀಡಿದರು. ಬಳಿಕ ನವಜೋಡಿಯ ಕೈಹಿಡಿದು ದೇಗುಲದೊಳಗೆ ಕರೆದೊಯ್ದು ದೇವರ ದರ್ಶನ ಮಾಡಿಸಿದ ಘಟನೆ ನಡೆದಿದೆ.

