ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೩೦ಕ್ಕೂ ಹೆಚ್ಚು ಹಟ್ಟಿಗಳಿದ್ದು, ಬುಡಕಟ್ಟು ಸಂಸ್ಕೃತಿಯ ನಾಯಕ ಸಮುದಾಯ ಈ ಭಾಗದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿದೆ. ಕೆಲವು ಸಂದರ್ಭಗಳಲ್ಲಿ ತಮ್ಮ ಸಮುದಾಯಕ್ಕೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮವಾದರೆ ಅದನ್ನು ವಿರೋಧಿಸುವ ಶಕ್ತಿಗಳೇ ಹೆಚ್ಚು.
ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡೆಹಟ್ಟಿ ಗ್ರಾಮದ ಚಂದ್ರಪ್ಪ ಎಂಬುವವರ ಪುತ್ರಿ ಶ್ರಾವಣಿ(೨೧), ನನ್ನಿವಾಳ ಗ್ರಾಮದ ತಿಪ್ಪೇಸ್ವಾಮಿ ಎಂಬುವವರ ಪುತ್ರ ಪೃಥ್ವಿರಾಜ್(೨೨) ಇಬ್ಬರು ಸಹಪಾಠಿಗಳಾಗಿದ್ದು, ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಲ್ಲದೆ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಶ್ರಾವಣಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಪೃಥ್ವಿರಾಜ್ ಪರಿಶಿಷ್ಟ ಜಾತಿಯನಾಗಿದ್ದು ಇವರ ಅಂತರ್ಜಾತಿ ವಿವಾಹಕ್ಕೆ ಮನೆಯವರ ವಿರೋಧವಿದ್ದು, ಎರಡ್ಮೂರು ಬಾರಿ ಗ್ರಾಮ ಹಾಗೂ ಪೊಲೀಸ್ ಠಾಣೆಯಲ್ಲಿ ಸಂಧಾನ ಸಭೆ ನಡೆದಿತ್ತು.
ಇವರಿಬ್ಬರ ವಿವಾಹಕ್ಕೆ ಯಾವುದೇ ಸಕರಾತ್ಮಕ ನಿಲುವು ತಾಳಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಶ್ರಾವಣಿ ಮತ್ತು ಪೃಥ್ವಿರಾಜ್ ವಿವಾಹವಾಗಿ ವಿವಾಹದ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಚಂದ್ರಪ್ಪನ ಬಂಧುಗಳು ಮಾ.೭ರ ಶುಕ್ರವಾರ ರಾತ್ರಿ ಗುಂಪುಗಟ್ಟಿಕೊಂಡು ನನ್ನಿವಾಳ ಗ್ರಾಮಕ್ಕೆ ಆಗಮಿಸಿ ತಿಪ್ಪೇಸ್ವಾಮಿಯನ್ನು ಅವಾಚ್ಯ ಶಬ್ದಗಳಿಂದ ಬೈದು ನಿನ್ನ ಕುಮ್ಮಕ್ಕಿನಿಂದಲೇ ಈ ರೀತಿಯಾಗಿದೆ ಎಂದು ಗಲಾಟೆ ಮಾಡಿ ಮನೆಯ ಬಾಗಿಲನ್ನು ಒಡೆದು, ತಿಪ್ಪೇಸ್ವಾಮಿಯ ಬೈಕ್ ಮೇಲೆ ಕಲ್ಲು ಎತ್ತಿಹಾಕಿದ್ದಾರೆ.
ಚಂದ್ರಪ್ಪ ಮನೆ ಪಕ್ಕದಲ್ಲಿದ್ದ ಶಿವರಾಜ್ ಎಂಬುವವರ ಬೈಕ್, ಸೋಮಶೇಖರ್‌ರವರ ಟಾಟಾ ಮ್ಯಾಜೀಕ್ ಮೇಲೆ ಕಲ್ಲು ಎತ್ತಿಹಾಕಿ ಗಲಭೆ ಎಬ್ಬಿಸಿದ್ದಾರೆ.
ಸುದ್ದಿ ತಿಳಿದ ಡಿವೈಎಸ್ಪಿ ರಾಜಣ್ಣ, ಪಿಎಸ್‌ಐ ಜೆ.ಶಿವರಾಜ್ ಮತ್ತು ತಂಡ ಗ್ರಾಮಕ್ಕೆ ತೆರಳಿ ಹಲ್ಲೆ ನಡೆಸಿದವರನ್ನು ವಶಕ್ಕೆ ಪಡೆದಿದ್ದಾರೆ.
ತಿಪ್ಫೇಸ್ವಾಮಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಬಂಡೆಹಟ್ಟಿಯ ಬೋರಯ್ಯ, ಸುನೀಲ್, ಸುರೇಶ್, ಪಾಪಯ್ಯ, ಕಾಟಯ್ಯ, ಜಯಣ್ಣ ಎಂಬುವವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವಣವಿದ್ದು, ಪೊಲೀಸರ ಬಂದೋ ಬಸ್ತ್ ಮುಂದುವರೆದಿದೆ.