ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರಕ್ಕೆ ಕೂಗಳತೆ ದೂರದಲ್ಲಿರುವ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಆದಿವಾಲ ಗ್ರಾಮದ ಆಟೋ ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಿಂದ ತೇರು ಬೀದಿಯವರೆಗೆ ರಸ್ತೆ ಹಾಗೂ ಚರಂಡಿ ಹದಗೆಟ್ಟಿದ್ದು ಸಾರ್ವಜನಿಕರಿಗೆ ಹಾಗು ಮಕ್ಕಳಿಗೆ ಓಡಾಡಲು ಬಹಳ ತೊಂದರೆ ಉಂಟಾಗುತ್ತಿದೆ.
ಇಡೀ ಗ್ರಾಮದ ಜನತೆ ಹೆಚ್ಚಾಗಿ ಬಳಸುವ ರಸ್ತೆ ಇದಾಗಿದ್ದು ಕಳೆದ ಹತ್ತು ವರ್ಷಗಳಿಂದ ರಸ್ತೆ ದುರಸ್ತಿ ಕೆಲಸ ಕನಸಾಗಿಯೆ ಉಳಿದಿದೆ. ಕೆಲಸ ಕಾರ್ಯಗಳ ನಿಮಿತ್ತ ಇತರೆಡೆಯಿಂದ ಬರುವವರು ರಸ್ತೆಯ ಸ್ಥಿತಿ ಕಂಡು ಸ್ಥಳೀಯ ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಅದಷ್ಟು ಬೇಗ ಗ್ರಾಮ ಪಂಚಾಯಿತಿ ರಸ್ತೆ ನಿರ್ಮಿಸಲು ಕ್ರಮ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಿಂದ ತೇರು ಬೀದಿಯವರೆಗೆ ಗುಂಡಿಗಳಿಂದ ಕೂಡಿದ ರಸ್ತೆಗಳು, ಅಲ್ಲಲ್ಲಿ ಮುಚ್ಚಿ ಮತ್ತು ಕಿತ್ತು ಹೋಗಿರುವ ಚರಂಡಿ, ರಸ್ತೆಯಲ್ಲೇ ತುಂಬಿ ಹರಿಯುವ ತ್ಯಾಜ್ಯ ನೀರು, ತೆರೆದ ಚರಂಡಿಯಿಂದ ದುರ್ವಾಸನೆ, ಹೆಚ್ಚುತ್ತಿರುವ ಮಾಲಿನ್ಯದಿಂದ ಜನರ ಬದುಕು ಹೇಳತೀರದಂತಾಗಿದೆ.
ಕೆಲವರು ರಸ್ತೆಯಲ್ಲೇ ಘನ ತ್ಯಾಜ್ಯ ಸುರಿಯುತ್ತಿದ್ದು, ಆಗಾಗ್ಗೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಕಿರಿದಾದ, ಗುಂಡಿಗಳಿಂದ ಕೂಡಿದ ರಸ್ತೆಗಳು, ಮಳೆಯ ಸಮಯದಲ್ಲಿ ನೀರಿನೊಂದಿಗೆ ಸೇರಿ, ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರಿಗೆ, ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ದಿನನಿತ್ಯ ಕೆಸರು ಗದ್ದೆಯಂತಿರುವ ರಸ್ತೆಯಲ್ಲೇ ಓಡಾಟ ಮಾಡುವ ಮೂಲಕ ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡು ಓಡಾಡುವಂತಾಗಿದೆ. ಸ್ಥಳೀಯ ಗ್ರಾಪಂ ಆಡಳಿತಕ್ಕೆ, ಚುನಾಯಿತ ಪ್ರತಿನಿಧಿಗಳಿಗೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರುತ್ತಾರೆ.
ಈ ಪ್ರದೇಶದ ರಸ್ತೆ ಭಯಾನಕ ಸ್ಥಿತಿಯಲ್ಲಿವೆ. ಮಳೆಯ ಸಮಯದಲ್ಲಿ ಹೊಂಡಗಳು ಮತ್ತು ನೀರು ತುಂಬುವುದರಿಂದ ಪ್ರಯಾಣವು ಅತ್ಯಂತ ಅಪಾಯಕಾರಿಯಾಗಿದೆ. ಪದೇ ಪದೇ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನೋವುಂಡ ಗ್ರಾಮಸ್ಥರು ಅಳಲು ತೋಡಿಕೊಂಡು ತುರ್ತಾಗಿ ರಸ್ತೆ, ಚರಂಡಿ ದುರಸ್ತಿ ಮಾಡಿಸುವಂತೆ ಒತ್ತಾಯಿಸಿದ್ದಾರೆ.