ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯ ಚುನಾವಣಾ ಆಯೋಗವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಭಾಶೆಟ್ಟಿ ಹಳ್ಳಿ ಪಟ್ಟಣ ಪಂಚಾಯ್ತಿಯ ಸಾರ್ವತ್ರಿಕ ಚುನಾವಣೆ ಹಾಗೂ ದೊಡ್ಡಬಳ್ಳಾಪುರ ನಗರಸಭೆಯ ಒಂದು ಸ್ಥಾನಕ್ಕೆ ಉಪ ಚುನಾವಣೆ ನಡೆಸಲು ಚುನಾವಣಾ ವೇಳಾಪಟ್ಟಿ ಘೋಷಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎ. ಬಿ. ಬಸವರಾಜು ತಿಳಿಸಿದ್ದಾರೆ.
ನೂತನವಾಗಿ ರಚನೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಪೈಕಿ ಭಾಷೆಟ್ಟಿಹಳ್ಳಿ ಪಟ್ಟಣಪಂಚಾಯ್ತಿಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು ಪಟ್ಟಣ ಪಂಚಾಯ್ತಿಯ ಒಟ್ಟು 19ವಾರ್ಡ್ ಗಳಿಗೆ ಚುನಾವಣೆ ನಡೆಯಲಿದೆ. ಹಾಗೂ ವಿವಿಧ ಕಾರಣಗಳಿಂದ ತೆರವಾದ ದೊಡ್ಡಬಳ್ಳಾಪುರ ನಗರಸಭೆಯ ಹೇಮಾವತಿ ಪೇಟೆ 21ನೇ ವಾರ್ಡಿನ ಉಪ ಚುನಾವಣೆ ನಡೆಯಲಿದೆ.
ಚುನಾವಣಾ ವೇಳಾಪಟ್ಟಿ
ಜಿಲ್ಲಾಧಿಕಾರಿ ಗಳಿಂದ 2025 ಡಿಸೆಂಬರ್ 02 ಮಂಗಳವಾರ ಅದಿಸೂಚನೆ ಹೊರಡಿಸಲಾಗುವುದು. ಡಿಸೆಂಬರ್ 09 ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಡಿಸೆಂಬರ್ 10 ಬುಧವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಡಿಸೆಂಬರ್ 12 ಶುಕ್ರವಾರ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ.
ಡಿಸೆಂಬರ್ 21 ಭಾನುವಾರ ಮತದಾನ (ಬೆಳಿಗ್ಗೆ 7ಗಂಟೆಯಿಂದ ಸಂಜೆ 5 ಗಂಟೆಯವರೆಗೆ ) ನಡೆಯಲಿದೆ. ಮರು ಮತದಾನ ಅಗತ್ಯವಿದ್ದಲ್ಲಿ ಡಿಸೆಂಬರ್ 23 ಮಂಗಳವಾರದಂದು (ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ) ಮರು ಮತದಾನ ನಡೆಯಲಿದೆ. ಮತ ಎಣಿಕೆಯು ಡಿಸೆಂಬರ್ 24 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಡಿಸೆಂಬರ್ 24 ಕ್ಕೆ ಚುನಾವಣಾ ಪ್ರಕ್ರಿಯೆ ಮುಕ್ತಾಯ ಗೊಳ್ಳಲಿದೆ.
ಚುನಾವಣಾ ಸದಾಚಾರ ಸಂಹಿತೆಯು 2025 ಡಿಸೆಂಬರ್ 02 ರಿಂದ ಡಿಸೆಂಬರ್ 24 ರವರೆಗೆ ಸಾರ್ವತ್ರಿಕ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಹಾಗೂ ಉಪ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಗಳ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಎ. ಬಿ. ಬಸವರಾಜು ತಿಳಿಸಿದ್ದಾರೆ.

