ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭೂ ಕಬಳಿಕೆ ನಿಷೇಧ ಕಾಯ್ದೆ 192(ಎ) ಅನುಸಾರ ಕೆರೆಗಳ ಒತ್ತುವರಿ ತೆರವುಗೊಳಿಸುವುದು ಸಂಬಂದ ಪಟ್ಟ ಅಧಿಕಾರಿಗಳ ಕರ್ತವ್ಯವಾಗಿದೆ. ಒತ್ತುವರಿ ತೆರವುಗೊಳಿಸಲು ವಿಫಲರಾದ ಅಧಿಕಾರಿಗಳ ವಿರುದ್ದ ಯಾವುದೇ ಮುಲಾಜು ತೋರದೆ 192(ಬಿ) ಅಡಿ ಪ್ರಕರಣ ದಾಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೃಹತ್ ನೀರಾವರಿ, ಸಣ್ಣ ನೀರಾವರಿ, ಪಂಚಾಯತ್ ಇಂಜಿನಿಯರಿಂಗ್, ಗ್ರಾ.ಪಂ. ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಜಲಮೂಲಗಳನ್ನು ವೈಜ್ಞಾನಿಕವಾಗಿ ಗುರುತಿಸಬೇಕು. ಹೀಗೆ ಗುರುತಿಸಿದ ಜಲಮೂಲಗಳ ಸರ್ವೇ ಕಾರ್ಯವನ್ನು ಇಲಾಖಾವಾರು ಕೈಗೊಂಡು, ಒತ್ತುವರಿ ಕಂಡುಬಂದರೆ ತಕ್ಷಣವೇ ತೆರವಿಗೆ ಮುಂದಾಗಬೇಕು. ಯಾವುದೇ ಕಾರಣಕ್ಕೂ ಸುಪ್ರಿಂ ಕೋರ್ಟ್ ಹಾಗೂ ಹಸಿರು ನ್ಯಾಯಾಧೀಕರಣ ನೀಡಿರುವ ತೀರ್ಪುಗಳನ್ನು ಉಲಂಘಿಸಿ, ಕೆರೆ ಹಾಗೂ ಜಲಮೂಲಗಳ ಬಫರ್ ಜೋನ್ ಪ್ರದೇಶದಲ್ಲಿ ಶಾಶ್ವತ ನಿರ್ಮಾಣ ಕಾರ್ಯಗಳಿಗೆ ಅನುಮತಿ ನೀಡಬಾರದು ಎಂದರು.
ಬಾಕಿ ಕೆರೆಗಳ ಸರ್ವೇ ಕಾರ್ಯಕ್ಕೆ ಪೂರ್ಣಗೊಳಿಸಲು ಗಡುವು :
ಜಿಲ್ಲೆಯಲ್ಲಿ 437 ಜಲಮೂಲಗಳನ್ನು ಗುರುತಿಸಲಾಗಿದೆ. ಇದರಲ್ಲಿ ಸಣ್ಣ ನೀರಾವರಿ ಇಲಾಖೆಯಡಿ 166 ಕೆರೆಗಳಿವೆ. ಈ ಪೈಕಿ 2 ಕೆರೆಗಳ ಸರ್ವೆ ಕಾರ್ಯ ಬಾಕಿ ಇದೆ. ಸರ್ವೆ ನಡೆಸಿದ ಕೆರೆಗಳ ಪೈಕಿ 75 ಕೆರೆಗಳಲ್ಲಿ ಒತ್ತುವರಿ ಗುರುತಿಸಲಾಗಿದ್ದು, 64 ಕೆರೆಗಳ ಒತ್ತುವರಿ ತೆರವು ಗೊಳಿಸಲಾಗಿದೆ. 11 ಕೆರೆಗಳ ಒತ್ತುವರಿ ಬಾಕಿಯಿದೆ.
ಪಂಚಾಯತ್ ಇಂಜಿನಿಯರಿಂಗ್ ಹಾಗೂ ಗ್ರಾಮ ಪಂಚಾಯಿತಿಗಳ ಅಡಿ 269 ಕೆರೆಗಳಿದ್ದು, 134 ಕೆರೆಗಳ ಸೆರ್ವ ಪೂರ್ಣಗೊಳಿಸಲಾಗಿದೆ. 135 ಕೆರೆಗಳ ಸರ್ವೆ ಕಾರ್ಯ ಬಾಕಿಯಿದೆ. 29 ಕೆರೆಗಳಲ್ಲಿ ಒತ್ತುವರಿ ಗುರುತಿಸಲಾಗಿದ್ದು, 10 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. 19 ಕೆರೆಗಳ ಒತ್ತುವರಿ ತೆರವು ಬಾಕಿಯಿದೆ. ಬೃಹತ್ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 2 ಕೆರೆಗಳಿವೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಬರುವ ಸೋಮವಾರದಿಂದಲೇ ಕೆರೆಗಳ ಸರ್ವೆಕಾರ್ಯ ಆರಂಭಿಸಬೇಕು. ಸರ್ವೆ ಕೈಗೊಳ್ಳೂವ ಕೆರೆಗಳ ಮಾಹಿತಿಯನ್ನು ಭೂ ದಾಖಲೆಗಳ ಉಪನಿರ್ದೇಶಕರಿಗೆ ನೀಡಿ, ದಿನಾಂಕ ಗೊತ್ತುಪಡಿಸಿ, ತಹಶೀಲ್ದಾರ್‌ಗಳ ನೇತೃತ್ವದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳದಲ್ಲಿದ್ದು, ಸರ್ವೆ ಕಾರ್ಯ ಪೂರ್ಣಗೊಳಿಸಬೇಕು. 3 ತಿಂಗಳ ಒಳಗೆ ಜಿಲ್ಲೆಯ ಎಲ್ಲಾ ಕೆರೆಗಳ ಸರ್ವೆಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಗಡುವು ನೀಡಿದರು.
ಟ್ರಂಚ್ ಹಾಗೂ ಬಯೋ ಫೆನ್ಸಿಂಗ್ ಅಳವಡಿಕೆಗೆ ಸೂಚನೆ :
ಸರ್ವೆ ಕಾರ್ಯ ಪೂರ್ಣಗೊಂಡು ಸರಹದ್ದು ಗುರುತಿಸಿದ ಕೆರೆಗಳ ಸುತ್ತಲೂ ಸಂಬAಧ ಪಟ್ಟ ಅಧಿಕಾರಿಗಳು ಟ್ರಂಚ್ ಹೊಡಿಸಬೇಕು. ಕಲ್ಲುಗಂಬಗಳನ್ನು ನೆಟ್ಟು ಬೇಲಿ ಅಳವಡಿಸಬೇಕು. ಜೊತೆಗೆ ಸಾಮಾಜಿಕ ಅರಣ್ಯ ವಿಭಾಗದಿಂದ ಸಸಿಗಳನ್ನು ಪಡೆದು ಬಯೋ ಫೆನ್ಸಿಂಗ್ ಅಳವಡಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮನರೇಗಾದಡಿ ಗ್ರಾಮ ಪಂಚಾಯಿತಿಗಳಲ್ಲಿ ಕೆರೆಗಳ ಸುತ್ತಲೂ ಗಿಡಗಳನ್ನು ಬೆಳೆಸಲು ಯೋಜನೆ ರೂಪಿಸಬೇಕು. ಸರಹದ್ದು ಗುರುತಿಸಿದ ನಂತರ, ಕೆರೆಗಳನ್ನು ಒತ್ತುವರಿ ಮಾಡಿ ಉಳಿಮೆ ಹಾಗೂ ಇತರೆ ಚಟುವಟಿಕೆ ಕೈಗಳ್ಳುತ್ತಿರುವವರನ್ನು ಅಲ್ಲಿಂದ ತೆರವುಗೊಳಿಸಬೇಕು. ತೆರವಿನ ವೇಳೆ ಯಾವುದೇ ಕಾನೂನು ಸುವ್ಯವಸ್ಥೆಗೆ ತೊಡಕು ಕಂಡುಬಂದರೆ ಸಂಬಂಧ ಪಟ್ಟ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯಿಂದ ರಕ್ಷಣೆ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ತಿಳಿಸಿದರು.
ತಾಲ್ಲೂಕು ಕೆರೆ ಸಂರಕ್ಷಣ ಸಮಿತಿ ಸಭೆ ನಡೆಸಲು ನಿರ್ದೇಶನ:
ಎಲ್ಲ ತಾಲ್ಲೂಕುಗಳ ತಹಶೀಲ್ದಾರರು ತಮ್ಮ ಅಧ್ಯಕ್ಷತೆಯಲ್ಲಿ ವಾರದೊಳಗೆ ತಾಲ್ಲೂಕು ಕೆರೆ ಸಂರಕ್ಷಣ ಸಮಿತಿ ಸಭೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಭೆಯಲ್ಲಿ ನಿರ್ದೇಶನ ನೀಡಿದರು.
ಉಪವಿಭಾಗಧಿಕಾರಿಗಳ ನೇತೃತ್ವದಲ್ಲಿ 15 ದಿನಗಳ ಒಳಗೆ ಜಿಲ್ಲೆಯ ಎಲ್ಲ ಜಲಮೂಲ ಹಾಗೂ ಕೆರೆಗಳ ಆಕಾರ್‌ಬಂದ್ ಕಾರ್ಯ ಕೈಗೊಂಡು, ಇದರ ಪ್ರಕಾರ ಸರ್ವೆ ನಂಬರ್, ಆರ್.ಟಿ.ಸಿ ಮಾಡಬೇಕು. ಜಲಮೂಲಗಳ ಹಾಗೂ ಬಫರ್ ಜೋನ್ ಪ್ರದೇಶವನ್ನು ಸ್ಪಷ್ಟವಾಗಿ ಬಣ್ಣದಿಂದ ಗುರುತಿಸಿ ನಕ್ಷೆಯಲ್ಲಿ ಸಿದ್ದಪಡಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಕೆರೆಗಳ ಹಸ್ತಾಂತರಕ್ಕೆ ಸೂಚನೆ:
ಚಿತ್ರದುರ್ಗ ನಗರದ ಮಠದ ಕುರಬರಹಟ್ಟಿ, ಹಿರಿಯೂರಿನ ಯರದಕಟ್ಟೆ, ಚಳ್ಳಕೆರೆ ನಗರಂಗೆರೆ, ಹೊಳಲ್ಕೆರೆ ಪಟ್ಟಣದ ಹೆಸರಗಟ್ಟೆ (ಶಿವನ ಕೆರೆ) ಕೆರೆಗಳನ್ನು ನಿಯಮಾನುಸಾರ ನಗರ ಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಹಸ್ತಾಂತರಿಸಬೇಕು. ಸರ್ಕಾರ ಹಾಗೂ ನಗರಭಿವೃದ್ಧಿ ಪ್ರಾಧಿಕಾರಗಳ ಅನುದಾದಡಿ ಈ ಕೆರೆಗಳ ಸೌಂದರ್ಯಿಕರಣ, ಕೆರೆ ಆವಾಸದ ಸಂರಕ್ಷಣೆಗೆ ಯೋಜನೆ ರೂಪಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಠದ ಕುರಬರಹಟ್ಟಿ ಕೆರೆಯ ಅಭಿವೃದ್ಧಿಗೆ ರೂ.5 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿರುವುದಾಗಿ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ಸಭೆಯಲ್ಲಿ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಕೆಯಾದ ದೂರುಗಳ ಕುರಿತು ಚರ್ಚಿಸಲಾಯಿತು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಶೋಕಾಸ್ ನೋಟಿಸು ನೀಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಲ್ಲಿಕಾರ್ಜುನ್, ಭೂಧಾಖಲೆಗಳ ಉಪನಿರ್ದೇಶಕ ರಾಮಾಂಜಿನೇಯ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ತಹಶೀಲ್ದಾರುಗಳಾದ ಡಾ.ನಾಗವೇಣಿ, ರೆಹಮಾನ್ ಪಾಷ, ತಿರುಪತಿ ಪಾಟೀಲ್, ಫಾತೀಮಾ.ಬಿ.ಬಿ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.