ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಸಮೀಪದ ಕುಂಚಿಗನಾಳ್ ಕಣಿವೆಯ ಸುಮಾರು 40 ಎಕರೆ ಜಾಗದಲ್ಲಿ 47 ಕೋಟಿ ಅಂದಾಜು ವೆಚ್ಚದಲ್ಲಿ ನೂತನ ಜಿಲ್ಲಾಧಿಕಾರಿಗಳ ಕಟ್ಟಡ ಸಂಪೂರ್ಣಗೊಂಡಿದೆ. ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು ಆ ಕಟ್ಟಡಕ್ಕೆ ಸ್ಥಳಾಂತರ ಮಾಡಿದರೆ
ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಒಳ್ಳೆಯದು. ಜನಪ್ರತಿನಿಧಿಗಳ ದೂರದೃಷ್ಠಿ ಸಮಗ್ರ ಅಭಿವೃದ್ಧಿಗೆ ರಹದಾರಿಯಾಗಬೇಕಿತ್ತು.
ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣ ಅವೈಜ್ಞಾನಿಕವಾಗಿದ್ದು ನಗರದ ಹೃದಯ ಭಾಗದ ತೋಟಗಾರಿಕೆ ಕಚೇರಿ ಜಾಗದಲ್ಲೇ ಹೊಸದಾಗಿ ಡಿಸಿ ಕಚೇರಿ ನಿರ್ಮಾಣ ಮಾಡಲಾಗುತ್ತದೆ ಎಂದು ಜನಪ್ರತಿನಿಧಿಗಳ ಅಭಿಪ್ರಾಯವಾಗಿದೆ.
ಈಗಾಗಲೇ ತೋಟಗಾರಿಕೆ ಇಲಾಖೆ ಜಾಗವನ್ನ ವಶ ಪಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತದ ಮೂಲಕ ಪ್ರಸ್ತಾವನೆ ಸಲ್ಲಿಕೆ ಆಗಿದೆ ಎನ್ನಲಾಗಿದೆ. ಕುಂಚಿಗನಾಳ್ ಜಾಗವು ಉತ್ತಮ ಆಯ್ಕೆಯಾಗಿದೆ. ಈ ಜಾಗವು ಚಿತ್ರದುರ್ಗ ನಗರದ ಹೊರಭಾಗದಲ್ಲಿದ್ದು, ವಾಹನ ಸಂಚಾರಕ್ಕೆ ಅನುಕೂಲಕರವಾಗಿದೆ. ಜೊತೆಗೆ, ಈ ಜಾಗವು ಸಾಕಷ್ಟು ವಿಸ್ತಾರವಾಗಿದ್ದು, ಕಚೇರಿ ಕಟ್ಟಡ ಮತ್ತು ಇತರ ಸೌಲಭ್ಯಗಳಿಗೆ ಸಾಕಷ್ಟು ಜಾಗವಿದೆ.
ರಾಜ್ಯದ ಹಾವೇರಿ, ದಾವಣಗೆರೆ, ಬಾಗಲಕೋಟೆ, ಬಳ್ಳಾರಿ ಜಿಲ್ಲೆಗಳು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ನಗರದ ಹೊರ ಭಾಗದಲ್ಲೇ ಇವೆ.
ಜಿಲ್ಲಾಧಿಕಾರಿಗಳ ಕಚೇರಿ ನಗರದ ಹೊರ ಭಾಗದಲ್ಲಿರುವುದರಿಂದ ಹಲವಾರು ಪ್ರಯೋಜನಗಳಿವೆ.
ವಾಹನ ಸಂಚಾರಕ್ಕೆ ಅನುಕೂಲಕರವಾಗುತ್ತದೆ ಮತ್ತು ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ. ನಗರದ ಒಳ ಭಾಗದಲ್ಲಿ ಸಾಕಷ್ಟು ಕಿರಿಕಿರಿ ಇದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಕುಂಚಿಗನಾಳ್ ಕಣಿವೆಯ ಜಿಲ್ಲಾಧಿಕಾರಿಗಳ ಕಚೇರಿ ಸ್ಥಳಾಂತರವಾದರೆ ಹೊಸ ಹೊಸ ನಗರ ಪ್ರದೇಶಗಳ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ಆಗ ಜಿಲ್ಲಾ ಕೇಂದ್ರವು ಸಾಕಷ್ಟು ಅಭಿವೃದ್ಧಿ ಹೊದಲಿದೆ. ಜಿಲ್ಲಾಧಿಕಾರಿಗಳ ಕಚೇರಿ ಕುಂಚಿಗನಾಳ್ ಜಾಗಕ್ಕೆ ಸ್ಥಳಾಂತರಗೊಳ್ಳುವುದರಿಂದ ಹಲವು ಪ್ರಯೋಜನಗಳು, ಇತರೆ ಸೌಲಭ್ಯ ಸೌಕರ್ಯಗಳು ಆಗುವ ನಿರೀಕ್ಷೆಯಿದೆ. ಹಾಗಾಗಿ ಕುಂಚಿಗನಾಳ್ ಜಾಗದಲ್ಲಿ ಡಿಸಿ ಕಚೇರಿ ಸಂಪೂರ್ಣ ಪೂರ್ಣಗೊಂಡಿದ್ದು ಆ ಕಟ್ಟಡಕ್ಕೆ ಸ್ಥಳಾಂತರ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ.

ಕಣಿವೆ ಜಾಗವೇ ಏಕೆ ಬೇಕು?
ನಗರದ ಒಳಭಾಗದಲ್ಲಿರುವ ಕಟ್ಟಡಗಳಿಗಿಂತ ಈ ಜಾಗವು ಹೆಚ್ಚು ವಿಸ್ತಾರವಾಗಿದೆ. ಭವಿಷ್ಯದ ಅಭಿವೃದ್ಧಿ ಮತ್ತು ದೂರದೃಷ್ಠಿಯಿಂದ ನಗರ ಮತ್ತಷ್ಟು ವಿಸ್ತಾರಗೊಳ್ಳಲಿದೆ.
ಚಿತ್ರದುರ್ಗ ಐತಿಹಾಸಿಕ ನಗರವಾಗಿದ್ದು ಬಹುತೇಕ ರಸ್ತೆಗಳು ಕಿರಿದಾಗಿವೆ. ವಾಹನ ಸಂಚಾರಕ್ಕೆ ಕಷ್ಟವಾಗಲಿದೆ. ಕುಂಚಿಗನಾಳ್ ಕಣಿವೆಗೆ ಡಿಸಿ ಕಚೇರಿ ಸ್ಥಳಾಂತರಗೊಂಡರೆ ವಾಹನ ಸಂಚಾರಕ್ಕೆ ಅನುಕೂಲಕರವಾಗಿದೆ. ವಿವಿಧ ಇಲಾಖೆಗಳಿಗೆ ಅಗತ್ಯವಾಗಿ ಬೇಕಾದ ಕಚೇರಿ ಕಟ್ಟಡ ಮತ್ತು ಇತರ ಸೌಲಭ್ಯಗಳಿಗೆ ಸಾಕಷ್ಟು ಜಾಗವಿದೆ. ನಗರದ ಹೊರಭಾಗದಲ್ಲಿರುವುದರಿಂದ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯ ಕಡಿಮೆಯಾಗುತ್ತದೆ. ಸರ್ಕಾರವು ಈ ವಿಷಯದಲ್ಲಿ ಗಂಭೀರವಾಗಿ ಪರಿಗಣಿಸಿ, ಪ್ರಯೋಜನಗಳು ಮತ್ತು ಸವಾಲುಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ ನಗರದ ಹೊರ ಭಾಗದಲ್ಲಿರುವುದರಿಂದ ನಗರದ ಅಭಿವೃದ್ಧಿಗೆ ಸಹಾಯವಾಗುತ್ತದೆ ಮತ್ತು ಜನರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ.
ವೈದ್ಯಕೀಯ ಕಾಲೇಜ್ ಗೆ ಹೇಗೆ ವೈಜ್ಞಾನಿಕ?
ಚಿತ್ರದುರ್ಗದ ಹೊರವಲಯದ ಕುಂಚಿಗನಾಳ್ ಕಣಿವೆ ಮೇಲೆ ನಿರ್ಮಿಸಲಾಗಿರುವ ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡವು ಅವೈಜ್ಞಾನಿಕವಾಗಿದೆ ಎನ್ನುವುದು ಜನಪ್ರತಿನಿಧಿಗಳ ಅಭಿಪ್ರಾಯವಾಗಿದೆ.
ಡಿಸಿ ಕಚೇರಿಗೆ ಅವೈಜ್ಞಾನಿಕ ಎನ್ನುವುದಾದರೆ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಈ ಕಟ್ಟಡ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಡಿಸಿ ಕಚೇರಿಗೆ ಅವೈಜ್ಞಾನಿಕವಾದರೆ ವೈದ್ಯಕೀಯ ಕಾಲೇಜಿಗೆ ಹೇಗೆ ವೈಜ್ಞಾನಿಕವಾಗಲಿದೆ ಎನ್ನುವ ಪ್ರಶ್ನೆಯನ್ನ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳೇ ಹೇಳಬೇಕಾಗಿದೆ.
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಸೂಚನೆ ಮೇರೆಗೆ ಈಗಾಗಲೇ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ನೂತನ ಜಿಲ್ಲಾಧಿಕಾರಿಗಳ ಕಟ್ಟಡ ವಶಕ್ಕೆ ಸಮ್ಮತಿ ಸೂಚಿಸಿದ್ದಾರೆ. ಈ ನಿರ್ಧಾರವನ್ನು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಈ ಕಟ್ಟಡವನ್ನು ವೈದ್ಯಕೀಯ ಕಾಲೇಜಿನ ವಿವಿಧ ವಿಭಾಗಗಳ ಬಳಕೆಗಾಗಿ ಬಳಸಲು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಟ್ಟಡ ಸ್ಥಳಾಂತರ ಸಂಬಂಧ ಈಗಾಗಲೇ ಆದೇಶ ಹೊರಡಿಸಿದ್ದಾರೆ ಎನ್ನಲಾಗುತ್ತಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಪರಿಣಿತ ಅಧಿಕಾರಿಗಳ ಸಮಿತಿಯು ಶೀಘ್ರವೇ ಜಿಲ್ಲೆಗೆ ಆಗಮಿಸಿ, ಪರಿಶೀಲನೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಆರ್ಥಿಕ ಹೊರೆ ಹೆಚ್ಚಲಿದೆ:
ಚಿತ್ರದುರ್ಗದ ಹೊರವಲಯದಲ್ಲಿನ ಕುಂಚಿಗನಾಳ್ ಬಳಿ ನಿರ್ಮಿಸಲಾಗುತ್ತಿರುವ ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡವನ್ನು ವೈದ್ಯಕೀಯ ಕಾಲೇಜಿಗೆ ಹಸ್ತಾಂತರ ಮಾಡಿ ಹೊಸದಾಗಿ ತೋಟಗಾರಿಕೆ ಇಲಾಖೆ ಜಾಗದಲ್ಲಿ ಹೊಸ ಜಿಲ್ಲಾಡಳಿತ ಭವನ ನಿರ್ಮಾಣ ಮಾಡುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಆಗಲಿದೆ.
ಕಂದಾಯ ಇಲಾಖೆ ಒಪ್ಪಿಗೆ ಅಗತ್ಯ:
ಕಂದಾಯ ಇಲಾಖೆಯು ಈ ಕಟ್ಟಡ ನಿರ್ಮಾಣಕ್ಕೆ ಸುಮಾರು ₹47 ಕೋಟಿ ವೆಚ್ಚ ಮಾಡಿದೆ ಎಂದು ಅಂದಾಜಿಸಲಾಗಿದೆ. ಇಲಾಖೆವಾರು ಒಂದೊಂದು ಕೋಟಿ ರೂ. ಅನುದಾನವನ್ನ ಸರ್ಕಾರದಿಂದ ತರುವುದು ಸುಲಭದ ಕಾರ್ಯವಲ್ಲ. ಕಂದಾಯ ಇಲಾಖೆ ಅನುದಾನದಲ್ಲಿ ಬೃಹತ್ ಕಟ್ಟಡ ನಿರ್ಮಾಣ ಮಾಡಿದ್ದು ಅಷ್ಟು ಸುಲಭವಾಗಿ 47 ಕೋಟಿ ಮೊತ್ತದ ಕಟ್ಟಡವನ್ನು ವೈದ್ಯಕೀಯ ಕಾಲೇಜಿಗೆ ಬಳಸಿಕೊಳ್ಳಲು ಒಪ್ಪಿಗೆ ನೀಡುವುದು ಕಷ್ಟಸಾಧ್ಯ. ಏಕೆಂದರೆ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಸುಲಭವಾಗಿ ಒಪ್ಪುವಂತವರಲ್ಲ.
ಒಂದೊಂದು ರೂಪಾಯಿಗೂ ಲೆಕ್ಕ ಕೇಳುವಂತ ದಕ್ಷ ಮತ್ತು ಕ್ರಿಯಾಶೀಲ ಸಚಿವ ಕೃಷ್ಣಭೈರೇಗೌಡರು ಸರ್ಕಾರಕ್ಕೆ ಆರ್ಥಿಕ ಹೊರೆ ಆಗುವುದನ್ನ ಸುತರಾಂ ಒಪ್ಪುವುದಿಲ್ಲ. ಸಚಿವರು ಮತ್ತು ಕಂದಾಯ ಇಲಾಖೆ ಒಪ್ಪಿಗೆ ಬಹಳ ಮುಖ್ಯ.
ಈ ಕಟ್ಟಡವನ್ನು ಕಂದಾಯ ಇಲಾಖೆಯೇ ಇಟ್ಟುಕೊಂಡರೆ ವಿವಿಧ ವಿಭಾಗಗಳ ಬಳಕೆಗಾಗಿ ಬಳಸಲಾಗುವುದರಿಂದ, ಸಮಗ್ರ ಅಭಿವೃದ್ಧಿಗೆ ಸಹಾಯವಾಗಲಿದೆ ಮತ್ತು ಗುಣಮಟ್ಟ ಸುಧಾರಣೆಯಾಗಲಿದೆ.
ಪಂಚ ಗ್ಯಾರಂಟಿ ಹೊಡೆತ:
ತೋಟಗಾರಿಕೆ ಇಲಾಖೆ ಜಾಗದಲ್ಲಿ ಹೊಸ ಜಿಲ್ಲಾಧಿಕಾರಿಗಳ ಕಟ್ಟಡ ನಿರ್ಮಾಣ ಮಾಡಲಿಕ್ಕೆ ಸರ್ಕಾರದ ಬಳಿ ಹಣವಿಲ್ಲ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರವು ಹೆಚ್ಚಿನ ಹಣ ವಿನಿಯೋಗಿಸುತ್ತಿದೆ. ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಮತ್ತು ಅನ್ನಭಾಗ್ಯ ಯೋಜನೆಗಳಿಗೆ ಸುಮಾರು 56 ಸಾವಿರ ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ. ಹಾಗಾಗಿ ಹೊಸ ಹೊಸ ಕಟ್ಟಡಗಳ ನಿರ್ಮಾಣ ಸೇರಿದಂತೆ ಇತರೆ ಯೋಜನೆಗಳ ಅನುಷ್ಠಾನಕ್ಕೆ ಅನುದಾನ ಸಿಗುವುದು ಕಷ್ಟಸಾಧ್ಯವಾಗಿದ್ದು ಹೊಸ ಕಟ್ಟಡ ನಿರ್ಮಾಣಕ್ಕೆ ಹೊಡೆತ ಬೀಳುವ ಸಾಧ್ಯತೆ ಹೆಚ್ಚಾಗಿದೆ.
ಅವೈಜ್ಞಾನಿಕ ಹೇಗೆ ಆಗಲಿದೆ:
ಜಿಲ್ಲಾಧಿಕಾರಿಗಳ ಕಟ್ಟಡ ನಿರ್ಮಾಣ ಮಾಡುವ ಮೊದಲು ರಾಜ್ಯ ಸರ್ಕಾರದ ಹಿರಿಯ ತಾಂತ್ರಿಕ ಸಲಹಾ ಸಮಿತಿಯು ಮೊದಲಿಗೆ ತಾಂತ್ರಿಕ ಒಪ್ಪಿಗೆ ನೀಡಿದೆ. ಈ ಒಪ್ಪಿಗೆ ಆಧರಿಸಿ ರಾಜ್ಯ ಸರ್ಕಾರ ಆಡಳಿತಾತ್ಮಕ, ಆರ್ಥಿಕ ಅನುಮೋದನೆ ನೀಡಿದೆ. ನಂತರ ಟೆಂಡರ್ ಪ್ರಕ್ರಿಯೆ ಆರಂಭವಾಗಿ ನೂತನ ಜಿಲ್ಲಾಡಳಿತ ಕಚೇರಿ ನಿರ್ಮಾಣ ಆಗಿ ದಶಕಗಳ ಕನಸು ನನಸಾಗಿದೆ. ಈ ಹಂತದಲ್ಲಿ ನೂತನ ಡಿಸಿ ಕಚೇರಿ ಅವೈಜ್ಞಾನಿಕವಾಗಿದೆ ಎಂದರೆ ಹೇಗೆ! ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಕಾಂಗ್ರೆಸ್ ಸರ್ಕಾರವೇ ಜಾಗ ಗುರುತಿಸಿತ್ತು:
ಚಿತ್ರದುರ್ಗ ತಾಲೂಕಿನ ಕಸಬಾ ಹೋಬಳಿ ಕುಂಚಿಗನಾಳ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹೊಂದಿಕೊಂಡಂತೆ ಇರುವ ಕಣಿವೆ ಗುಡ್ಡದ ರಿ.ಸ.ನಂ.44ರಲ್ಲಿ ಸುಮಾರು 40 ಎಕರೆಯಷ್ಟು ಸರ್ಕಾರಿ ಜಮೀನಿನಲ್ಲಿ 47 ಕೋಟಿ ವೆಚ್ಚದಲ್ಲಿ ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಚಿತ್ರದುರ್ಗ ನಗರದಿಂದ ಸುಮಾರು ನಾಲ್ಕು ಕಿಲೋ ಮೀಟರ್ ದೂರದಲ್ಲಿದೆ. 2013-18ನೇ ಸಾಲಿನ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಆಂಜನೇಯ ಅವರು ಅಂದಿನ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯನವರೊಟ್ಟಿಗೆ ಅಂದು ಸ್ಥಳ ಪರಿಶೀಲನೆ ಮಾಡಿ ನೂತನ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದನ್ನು ಸ್ಮರಿಸಬಹುದಾಗಿದೆ. ಆದರೆ ಈಗಿನ ಅದೇ ಕಾಂಗ್ರೆಸ್ ಸರ್ಕಾರವೇ ನೂತನ ಜಿಲ್ಲಾಧಿಕಾರಿಗಳ ಕಟ್ಟಡವನ್ನೇ ಅವೈಜ್ಞಾನಿಕ ಎಂದು ಹೇಳುತ್ತಿರುವುದು ವಿಪರ್ಯಾಸವಾಗಿದೆ.
ಕಟ್ಟದ ಅಂದಾಜು ಪಟ್ಟಿ:
ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡವನ್ನು ಆರಂಭದಲ್ಲಿ 25 ಕೋಟಿ ರೂ.ಗಳಲ್ಲಿ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜಿಲ್ಲಾಡಳಿತ ಭವನಕ್ಕೆ ಅಗತ್ಯ ಇರುವ ಮೂಲ ಸೌಲಭ್ಯಗಳು, ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಸೇರಿದಂತೆ ಮತ್ತಿತರ ಕಚೇರಿಗಳ ಕಟ್ಟಡ ನಿರ್ಮಾಣಕ್ಕಾಗಿ 8.91 ಕೋಟಿ ರೂ.ಗಳ ಕಾಮಗಾರಿಗಳು ಬ್ಲಾಕ್ ಎ ನಲ್ಲಿ ಸೇರಿಸಲಾಗಿತ್ತು. 4.11 ಕೋಟಿ ರೂ.ನಲ್ಲಿ ಎಫ್.ಎಫ್, 1.53 ಕೋಟಿ ರೂ.ನಲ್ಲಿ ಎಸ್ಎಫ್ ಸಿವಿಲ್ ವರ್ಕ್, 3 ಕೋಟಿ ರೂ.ನಲ್ಲಿ ಕಾಂಕ್ರಿಟ್ ರಸ್ತೆಗಳು,
1.63 ಕೋಟಿ ರೂ.ನಲ್ಲಿ ಅಗತ್ಯ ಕುರ್ಚಿ, ಟೇಬಲ್ ಸೇರಿದಂತೆ ಇತರೆ ಯಂತ್ರೋಪಕರಣಗಳು, 63 ಲಕ್ಷ ದಲ್ಲಿ ಬ್ಲಾಕ್ ಎ ನಲ್ಲಿ ಟೆರ್ರೆಸ್ ನಿರ್ಮಾಣ, 19 ಲಕ್ಷದಲ್ಲಿ ನೆಟ್ ವರ್ಕ್ ಮತ್ತು ಸಂಪರ್ಕ, 4.22 ಲಕ್ಷದಲ್ಲಿ ಲೈಟಿಂಗ್ ಮತ್ತಿತರ ಸೌಲಭ್ಯಗಳನ್ನು ಒಳಗೊಂಡ 25 ಕೋಟಿಯಲ್ಲಿ ಕಟ್ಟಡ ನಿರ್ಮಾಣ ಆಗಬೇಕಿತ್ತು. ಆದರೆ ಕಣಿವೆ ಗುಡ್ಡದಲ್ಲಿ ಕಲ್ಲು ಬಂದಿದ್ದರಿಂದ ನೆಲ ಸಮತಟ್ಟು ಮಾಡಲು ಸಾಕಷ್ಟು ಅನುದಾನ ಖರ್ಚಾಗಿತ್ತು. ಒಟ್ಟಾರೆ 47 ಕೋಟಿ ರೂ. ಖರ್ಚಾಗಿದ್ದು ಲೋಕಾರ್ಪಣೆಗೆ ಕ್ಷಣಗಣನೆಯಲ್ಲಿದೆ ನೂತನ ಜಿಲ್ಲಾಧಿಕಾರಿಗಳ ಕಟ್ಟಡ.

