ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ತ್ರೈ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧ್ಯಕ್ಷತೆ ವಹಿಸಿ ನಡೆಸಿದ ಮಹತ್ವದ ಸಭೆಗೆ ಇಬ್ಬರು ಪ್ರಮುಖ ಶಾಸಕರ ಗೈರು ಎದ್ದು ಕಾಣುತ್ತಿತ್ತು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಇವರಿಬ್ಬರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಅಲ್ಲದೆ ರೈತಾಪಿ ಪರ ದನಿ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅನೇಕ ಸಂದರ್ಭಗಳಲ್ಲಿ ಈ ಇಬ್ಬರು ಶಾಸಕರು ಜನಪರವಾದ ಚರ್ಚೆಗಳಿಗೆ ದನಿಯಾಗಿ ಕೆಲಸ ಮಾಡುತ್ತಿದ್ದರು.
ಮೂರು ಮಂದಿ ಶಾಸಕರುಗಳ ಮುನಿಸು ಮತ್ತು ಶೀತಲ ಸಮರದಿಂದಾಗಿ ಮನೆಯೊಂದು ಮೂರು ಬಾಗಿಲು ಎನ್ನುವ ಪರಿಸ್ಥಿತಿ ಜಿಲ್ಲಾ ಕಾಂಗ್ರೆಸ್ ನಲ್ಲಿ ನಿರ್ಮಾಣವಾಗಿದೆ.
ತ್ರಿಮೂರ್ತಿಗಳು-
ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ ಗೋವಿಂದಪ್ಪ ಮತ್ತು ಡಿ.ಸುಧಾಕರ್ ಅವರು ತ್ರಿಮೂರ್ತಿಗಳಂತೆ (ಬ್ರಹ್ಮ, ವಿಷ್ಣು, ಮಹೇಶ್ವರ) ಇದ್ದರು. ಈ ಮೂರು ಮಂದಿ ಎಲ್ಲ ಸಂದರ್ಭದಲ್ಲೂ ಜೊತೆಗಿದ್ದು ಆಡಳಿತ ಮುನ್ನಡೆಸುತ್ತಿದ್ದರು. ಈ ಮೂರು ಮಂದಿ ಸೇರಿದರೆ ಅಲ್ಲಿ ಹಾಸ್ಯದ ಹೊನಲೇ ಹರಿಯುತ್ತಿತ್ತು. ಈ ಮೂರು ಶಾಸಕರುಗಳ ಮಾತುಗಳನ್ನ ಆಲಿಸಿದವರು ಹೊಟ್ಟೆ ಉಬ್ಬುವಂತೆ ನಗಾಡುತ್ತಿದ್ದರು. ಆದರೆ ಡಿಸಿಸಿ ಬ್ಯಾಂಕ್ ಚುನಾವಣೆ ಈ ಮೂರು ಶಾಸಕರನ್ನು ಮೂರು ದಿಕ್ಕು ಮಾಡಿದಂತೆ ಕಾಣುತ್ತಿದೆ. ಸಚಿವರಾದ ಡಿ.ಸುಧಾಕರ್ ವಿರುದ್ಧ ಗೋವಿಂದಪ್ಪ ಮತ್ತು ರಘುಮೂರ್ತಿ ತುಂಬಾ ಅಸಮಾಧಾನ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಈ ತ್ರಿಮೂರ್ತಿಗಳಲ್ಲಿ ಇದೇ ರೀತಿಯ ಮನಸ್ತಾಪ ಮುಂದುವರೆದರೆ ಭವಿಷ್ಯದ ರಾಜಕಾರಣದಲ್ಲಿ ಒಂದಿಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಟಿ.ರಘುಮೂರ್ತಿ-
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರು ಯಾವುದೇ ಸಣ್ಣ ಪುಟ್ಟ ಸಭೆ ನಡೆದರೂ ಕಡ್ಡಾಯವಾಗಿ ಹಾಜರಾಗಿ ಕ್ಷೇತ್ರದ ಸಮಸ್ಯೆಗಳು ಸೇರಿದಂತೆ ಜಿಲ್ಲೆಯ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಿ ಗಮನ ಸೆಳೆಯುತ್ತಿದ್ದರು.
ಅದರಲ್ಲೂ ರೈತಾಪಿ ವರ್ಗಗಳ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ಕೊಟ್ಟು ಚರ್ಚೆ ಮಾಡುತ್ತಿದ್ದರು.
ಆದರೆ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಅವರ ಗೈರು ಎದ್ದು ಕಾಣುತ್ತಿತ್ತು. ಅಷ್ಟೇ ಅಲ್ಲ ಜಿಲ್ಲೆಯಾದ್ಯಂತೆ ಆಗಸ್ಟ್ ತಿಂಗಳಲ್ಲಿ ಬಿತ್ತನೆ ಮಾಡಲಾದ ಶೇಂಗಾ ಫಸಲು ಬಹುತೇಕ ಕೊಳೆತು ಹೋಗಿದೆ. ಶಾಸಕ ರಘುಮೂರ್ತಿ ಸಭೆಯಲ್ಲಿದ್ದಿದ್ದರೆ ಗಮನ ಸೆಳೆದು ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದರು.
ಆದರೆ ಮೀರಾಸಾಬಿಹಳ್ಳಿ ಸೇರಿದಂತೆ ಚಳ್ಳಕೆರೆ ತಾಲೂಕಿನಾದ್ಯಂತ ಹಿಂದುಳಿದು ಬಿತ್ತನೆ ಮಾಡಿದ ಶೇಂಗಾ ಅಧಿಕ ಮಳೆಯಿಂದಾಗಿ ಕೊಳೆತು ಹೋಗಿರುವುದು ಒಂದು ಕಡೆಯಾದರೆ, ಅಗತ್ಯ ಇರುವ ಸಂದರ್ಭದಲ್ಲಿ ಮಳೆ ಬೀಳದೆ ಶೇಂಗಾ ಫಸಲು ಸಂಪೂರ್ಣ ನೆಲಕಚ್ಚಿತ್ತು. ಇದರಿಂದ ಇಳುವರಿ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.
ರಘುಮೂರ್ತಿ ಅವರ ಗೈರಿಗೆ ಡಿಸಿಸಿ ಬ್ಯಾಂಕ್ ಚುನಾವಣೆ ಎಫೆಕ್ಟ್ ಎನ್ನಲಾಗುತ್ತಿದೆ. ರಘುಮೂರ್ತಿ ಆಯ್ಕೆಯಾಗಬೇಕಿದ್ದ ಸೊಸೈಟಿಯನ್ನು ಸೂಪರ್ ಸೀಡ್ ಮಾಡಿಸಿರುವ ಸುಧಾಕರ್ ವಿರುದ್ಧ ಅವರಿಗೆ ಸಿಟ್ಟು ಇದ್ದಂತೆ ಕಾಣುತ್ತಿದ್ದು ಹಾಗಾಗಿ ಕೆಡಿಪಿ ಸಭೆಗೆ ಗೈರಾಗಿದ್ದಾರೆ ಎನ್ನಲಾಗಿದೆ.
ಬಿ.ಜಿ.ಗೋವಿಂದಪ್ಪ-
ಇನ್ನೂ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅವರು ಕೂಡ ಯಾವುದೇ ಅಧಿಕಾರಿಗಳು ನಡೆಸುವ ಸಭೆಗಳಿಗೆ ತಪ್ಪದೇ ಪಾಲ್ಗೊಳ್ಳುತ್ತಿದ್ದರು. ಕ್ಷೇತ್ರದ ಸಮಸ್ಯೆಗಳಿಗೆ, ಬೇಕು ಬೇಡಗಳಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತಿದ್ದರು. ಆದರೆ ಗೋವಿಂದಪ್ಪ ಇವರಿಗೂ ಡಿಸಿಸಿ ಬ್ಯಾಂಕ್ ಚುನಾವಣೆಯ ಎಫೆಕ್ಟ್ ಕಾಡಿದ್ದು ಅವರೂ ಕೂಡ ಕೆಡಿಪಿ ಸಭೆ ಗೈರಾಗಿದ್ದಾರೆ.
ಬಿಜೆ ಗೋವಿಂದಪ್ಪನವರನ್ನು ವಿಶ್ವಾಸಕ್ಕೆ ಪಡೆಯದೇ ಡಿ,ಸುಧಾಕರ್ ಅವರು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹೊಸದುರ್ಗದಿಂದ ಅನಂತ್ ಅವರನ್ನ ನಿರ್ದೇಶಕರನ್ನಾಗಿ ಮಾಡಿದ್ದಾರೆ. ಇದು ಗೋವಿಂದಪ್ಪ ಅವರಿಗೆ ಇಷ್ಟ ಇರಲಿಲ್ಲ ಎನ್ನಲಾಗಿದೆ. ಕಾರಣ ಅನಂತ್ ಅವರು ಗೋವಿಂದಪ್ಪನವರ ವಿರುದ್ಧ ಸ್ಪರ್ಧಿಸಲು ವಿಧಾನಸಭೆಗೆ ಟಿಕೆಟ್ ಕೇಳಿದ್ದರು ಎನ್ನುವ ಮಾತುಗಳು ಕೇಳಿ ಬಂದಿದೆ. ಹಾಗಾಗಿ ಗೋವಿಂದಪ್ಪ ಕೂಡ ಕೆಡಿಪಿ ಸಭೆಗೆ ಗೈರಾಗಿದ್ದು ಕಂಡು ಬಂದಿತು.
ಶಾಸಕರಾದ ಟಿ.ರಘುಮೂರ್ತಿ ಮತ್ತು ಬಿ.ಜಿ.ಗೋವಿಂದಪ್ಪ ಅವರುಗಳಿಲ್ಲದ ಕೆಡಿಪಿ ಸಭೆಯಲ್ಲಿ ಶಾಸಕ ಎಂ.ಚಂದ್ರಪ್ಪ ಪದೇ ಪದೇ ಪ್ರಶ್ನೆಗಳನ್ನು ಕೇಳಿ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಮುಂಚುತ್ತಿದ್ದು ಕಂಡು ಬಂದಿತು.