ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕಿನ 5 ವರ್ಷಗಳ ಆಡಳಿತ ಮಂಡಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಿಂದ 12 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದಾರೆ.
ಈಗಾಗಲೇ ಕಳೆದ ಸೆಪ್ಟೆಂಬರ್ 6 ರಂದು ಆರು ಮಂದಿ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದರು.
ಜಿಲ್ಲೆಯ ಹಲವು ಕೃಷಿ ಪತ್ತಿನ ಸಹಕಾರ ಬ್ಯಾಂಕುಗಳನ್ನು ಅಮಾನತುಗೊಳಿಸಲಾಗಿತ್ತು. ಈ ಅಮಾನತಿನ ವಿರುದ್ಧ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರು ಆಯ್ಕೆ ಬಯಸಿದ್ದ ಕಡಬನಕಟ್ಟೆ ಕೃಷಿ ಪತ್ತಿನ ಸಹಕಾರ ಸಂಘವನ್ನು ಅಮಾನತುಗೊಳಿಸಲಾಗಿತ್ತು. ಇದರ ವಿರುದ್ಧ ಹೈಕೋರ್ಟ್ ಗೆ ಶಾಸಕರು ಪ್ರಕರಣ ಕೊಂಡೊಯ್ದಿದ್ದರು ಎನ್ನುವುದು ಮಹತ್ವದ ಸಂಗತಿ. ಹಾಗಾಗಿ ಪ್ರಸಕ್ತ ಸಾಲಿನ ಡಿಸಿಸಿ ಬ್ಯಾಂಕ್ ಚುನಾವಣೆ ಅತ್ಯಂತ ಕುತೂಹಲ ಕೆರಳಿಸಿತ್ತು.
ಎ ಕ್ಷೇತ್ರದಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚಳ್ಳಕೆರೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಹಾಲಿ ಅಧ್ಯಕ್ಷ ಡಿ.ಸುಧಾಕರ್, ಹೊಳಲ್ಕೆರೆಯಿಂದ ಎಸ್.ಆರ್.ಗಿರೀಶ್, ಹಿರಿಯೂರಿನಿಂದ ಸಿ.ಎನ್.ಮಾಳಿಗೆ ಓ.ಮಂಜುನಾಥ್, ಹೊಸದುರ್ಗದ ಬಿ ಕ್ಷೇತ್ರದಿಂದ ಹೆಚ್.ಬಿ.ಮಂಜುನಾಥ್, ಚಳ್ಳಕೆರೆಯ ಇ ಕ್ಷೇತ್ರದಿಂದ ಕೆ.ಜಗಣ್ಣ ಹಾಗೂ ಜಿಲ್ಲೆಯ ಎಲ್ಲ ಪಟ್ಟಣ ಸಹಕಾರ ಬ್ಯಾಂಕುಗಳ ಮತ್ತು ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳ ಸಿ ಕ್ಷೇತ್ರದಿಂದ ರಘುರಾಮರೆಡ್ಡಿ ಸೇರಿ ಒಟ್ಟು 6 ಮಂದಿ ಅವಿರೋಧ ಆಯ್ಕೆಯಾಗಿದ್ದರು.
ಸೆಪ್ಟೆಂಬರ್ 12 ರಂದು ಗುರುವಾರ ನಡೆದ ಚುನಾವಣೆಯಲ್ಲಿ ಚಿತ್ರದುರ್ಗ, ಹೊಸದುರ್ಗ ಮತ್ತು ಹೊಳಲ್ಕೆರೆ ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಡಿ ಕ್ಷೇತ್ರದಿಂದ ಸಿರಿಗೆರೆಯ ಪಿ.ತಿಪ್ಪೇಸ್ವಾಮಿ, ಚಿತ್ರದುರ್ಗದಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಎ ಕ್ಷೇತ್ರದಿಂದ ಹೆಚ್.ಎಂ.ದ್ಯಾಮಣ್ಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಹೊಸದುರ್ಗ ತಾಲೂಕಿನ ಎ ಕ್ಷೇತ್ರದಿಂದ ಕೆ.ಅನಂತ, ಮೊಳಕಾಲ್ಮೂರು A ಕ್ಷೇತ್ರದಿಂದ ಹೆಚ್.ಟಿ.ನಾಗಿರೆಡ್ಡಿ, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಡಿ ಕ್ಷೇತ್ರದಿಂದ ಪಿ.ವಿನೋದಸ್ವಾಮಿ, ಜಿಲ್ಲೆಯ ಇನ್ನಿತರ ಸಂಘಗಳ ಎಫ್ ಕ್ಷೇತ್ರದಿಂದ ಚಿತ್ರದುರ್ಗದ ಎಂ.ನಿಶಾನಿ ಜಯಣ್ಣ ಇವರುಗಳು ಡಿಸಿಸಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಉಪ ವಿಭಾಗಾಧಿಕಾರಿ ಕಾರ್ತೀಕ್ ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಡಿಸಿಸಿ ಬ್ಯಾಂಕಿಗೆ ಆಯ್ಕೆಯಾದ ಎಲ್ಲ 12 ಮಂದಿ ನಿರ್ದೇಶಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಯೋಜನಾ ಮತ್ತು ಸಾಂಖ್ಯಿಕ ಸಚಿವರಾದ ಡಿ.ಸುಧಾಕರ್ ರವರೊಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.