ಸಾರ್ವಜನಿಕರಿಗೆ ಹೊರೆ ಆಗದಂತೆ ನೀರಿನ ದರ ಏರಿಕೆ-ಡಿಸಿಎಂ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾರ್ವಜನಿಕರಿಗೆ ಹೆಚ್ಚು ಹೊರೆ ಆಗದಂತೆ ನೀರಿನ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ಬೆಂಗಳೂರು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕಾವೇರಿ ಭವನದಲ್ಲಿ ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬಿಎಂಆರ್ ಡಿ ಸಿಎಲ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗರಿಗೆ ನೀರಿನ ದರ ಏರಿಕೆ ಅನಿವಾರ್ಯವಾಗಿದೆ. 2014 ರಿಂದ 2024ರ ವರೆಗೆ ಸುಮಾರು 11 ವರ್ಷದಿಂದ ನೀರಿನ ದರ ಹೆಚ್ಚಿಸಿಲ್ಲ. ಬೆಂಗಳೂರು ಜಲಮಂಡಳಿ ವಾರ್ಷಿಕ ಒಂದು ಸಾವಿರ ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಹಿಂದೆ ವಿದ್ಯುತ್ ಬಿಲ್ 35 ಕೋಟಿ ಇತ್ತು.‌ಈಗ 75 ಕೋಟಿ ರೂ. ಆಗುತ್ತಿದೆ. ಎಲ್ಲ ವೆಚ್ಚ ಸೇರಿ ಸುಮಾರು 85 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗುತ್ತಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ಜಲಮಂಡಳಿ ಅಧಿಕಾರಿಗಳು ದರ ಏರಿಕೆ ಅನಿವಾರ್ಯತೆ ಕುರಿತು ಈಗಾಗಲೆ ಬೆಂಗಳೂರಿನ ಶಾಸಕರಿಗೆ ಮನವಿ ಮಾಡಿದ್ದಾರೆ.‌ಸಂಬಳಕ್ಕೆ ಹಣ ಇಲ್ಲ, ತೊಂದರೆ ಆಗುತ್ತಿದೆ. ಬ್ಯಾಂಕ್​ಗಳು, ಹಣಕಾಸು ಸಂಸ್ಥೆಯವರು ನೀವು ನಷ್ಟದಲ್ಲಿ ಇದ್ದೀರ ಅಂತ ಸಾಲ ಕೊಡುತ್ತಿಲ್ಲ. ಒಂದು ಸಾವಿರ ಕೋಟಿ ರೂ.‌ನಷ್ಟ ನಿಭಾಯಿಸಬೇಕಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ನೀರಿನ ದರ ಏರಿಕೆ ಪ್ರಸ್ತಾವನೆ ಸಿದ್ಧಪಡಿಸಲು ಸೂಚನೆ ನೀಡಿದ್ದೇನೆ. ಸದ್ಯಕ್ಕೆ ಜಲಮಂಡಳಿಗೆ ಪ್ರಸ್ತಾವನೆ ನೀಡಲು ಹೇಳಿದ್ದೇನೆ. ಜನರಿಗೂ ಭಾರ ಆಗಬಾರದು‌
, ಸಂಸ್ಥೆಯೂ ನಡೆಯಬೇಕು ಎಂದು ಡಿಸಿಎಂ ಶಿವಕುಮಾರ್ ಸಮಜಾಯಿಷಿ ನೀಡಿದರು.

ಒಂದು ಪೈಸೆ ದರ:
ಪ್ರತಿ ಲೀಟರ್ ನೀರಿಗೆ ಒಂದು ಪೈಸೆ ದರ ನಿಗದಿ ಮಾಡಿ ಸ್ಲಂ ನಿವಾಸಿಗಳಿಗೂ ವಿಸ್ತರಣೆ ಮಾಡಲು ಯೋಚಿಸಲಾಗಿದೆ. ಒಂದು ಪೈಸೆಯಾದರು ಪ್ರತಿ ಲೀಟರ್​ಗೆ ಬಡವರೂ ಹಣ ಕೊಡಬೇಕು. ನೀರು ಬಳಸುವ ಎಲ್ಲರೂ ಲೆಕ್ಕಕ್ಕೆ ಸಿಗಲಿ ಅಂತ ಒಂದು ಪೈಸೆಯಾದರು ಹಣ ಕೊಡಬೇಕು. ಬಡವರು ಹೆಚ್ಚು ಹಣ ನೀಡಲು ಆಗದಿದ್ದರೆ ಒಂದು ಲೀಟರ್​ಗೆ ಒಂದು ಪೈಸೆಯಾದರೂ ನೀಡಲಿ ಎಂಬುದು ನಮ್ಮ ಅಭಿಲಾಷೆ. ಸ್ಲಂಗಳಲ್ಲಿ ಉಚಿತವಾಗಿ ಕೊಡುವ ನೀರನ್ನು ಅಕ್ರಮವಾಗಿ ಹೋಟೆಲ್ ನವರು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದಾರೆ ಎಂದು ಡಿಸಿಎಂ ಮಾಹಿತಿ ನೀಡಿದರು. ಅಕ್ರಮ ನೀರಿನ ಸಂಪರ್ಕ ಹೊಂದಿರುವವರು ಸಕ್ರಮ ಮಾಡುವ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳಿಗೆ ಒಂದು ವರದಿ ನೀಡಲು ಹೇಳಿದ್ದೇನೆ ಎಂದರು.

ಉಚಿತವಾಗಿ ನೀಡುತ್ತಿರುವ ಯೋಜನೆಗಳ ಕುರಿತು ಪರೋಕ್ಷವಾಗಿ ತಮ್ಮ ಇದೇ ಡಿಸಿಎಂ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲವನ್ನೂ ಎಷ್ಟು ದಿನ ಅಂತ ಉಚಿತವಾಗಿ ನಡೆಸಲು ಆಗುತ್ತೆ ಎಂದು ಪ್ರಶ್ನಿಸಿದರು.
ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗಿದೆ. ಬಳಿಕ ಎಲ್ಲಾ ಬೆಲೆ ಏರಿಕೆಯಾಗುತ್ತಿದೆ. ವಿದ್ಯುತ್ ದರ ಹೆಚ್ಚು ಆಗುತ್ತಲೇ ಇದೆ. ಸಂಬಳ
10% ಹೆಚ್ಚಳ ಮಾಡಿದ್ದೇವೆ. ಎಲ್ಲವನ್ನೂ ಎಷ್ಟು ದಿನ ಅಂತ ಉಚಿತವಾಗಿ ನಡೆಸಲು ಆಗುತ್ತೆ. ನಡೆಸಲು ಆಗುತ್ತಿಲ್ಲ. ಸಂಬಳ ಕೊಡುತ್ತಿಲ್ಲ ಅಂತ ಜಗಳ ಮಾಡುತ್ತಿದ್ದಾರೆ ಎಂದು ಡಿಸಿಎಂ ಹೇಳಿದರು.

ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಶನ್ ಏಜೆನ್ಸಿ(ಜೈಕಾ) ಅವರು ದುಡ್ಡು ಕೊಡಬೇಕಾದರೆ ಸರ್ಕಾರದ ಖಾತ್ರಿ ಕೇಳುತ್ತಿದ್ದಾರೆ. ಬಿಬಿಎಂಪಿ ಮಾದರಿಯಲ್ಲಿ ನೀರಿನ ಬಿಲ್ ಬಾಕಿ ಉಳಿಸಿಕೊಂಡವರಿಗೆ ಒಟಿಎಸ್ ಕೊಡಲು ಚಿಂತನೆ ಇದೆ. ಬೆಂಗಳೂರಲ್ಲಿ ಬೇಸಿಗೆ ವೇಳೆ ನೀರಿನ ಸಮಸ್ಯೆ ಆಗದಂತೆ ಈಗಿನಿಂದಲೇ ಸಿದ್ಧತೆ ನಡೆಸುತ್ತಿದ್ದೇವೆ. ನೀರಿನ ಸಮಸ್ಯೆ ಆಗದಂತೆ ಕೆರೆ ನೀರು ತುಂಬಿಸಿ, ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇವೆ ಎಂದು ಡಿಸಿಎಂ ತಿಳಿಸಿದರು.

ಕಾವೇರಿ ನೀರು ಪಡೆಯಬೇಕು:
ಕಾವೇರಿ
5ನೇ ಹಂತ ಯೋಜನೆ ಪೂರ್ಣವಾಗಿದ್ದು ಈ ಯೋಜನೆ ಅಡಿಯಲ್ಲಿ ಈಗಾಗಲೇ 15 ಸಾವಿರ ಜನ ನೀರಿನ ಸಂಪರ್ಕ ಪಡೆದಿದ್ದಾರೆ. ಇನ್ನೂ 20 ಸಾವಿರ ಜನ ನೀರಿನ ಸಂಪರ್ಕ ಪಡೆಯಬೇಕಾಗಿದೆ. ಸಾಕಷ್ಟು ಅಪಾರ್ಟ್​ಮೆಂಟ್​ಗಳು ಕಾವೇರಿ ನೀರಿನ ಸಂಪರ್ಕ ತೆಗೆದುಕೊಳ್ಳುತ್ತಿಲ್ಲ. ಅವರು ಕಡ್ಡಾಯವಾಗಿ ನೀರಿನ ಸಂಪರ್ಕ ತೆಗೆದುಕೊಳ್ಳಬೇಕು ಎಂದು ಡಿಸಿಎಂ ತಾಕೀತು ಮಾಡಿದರು. ಸಾಕಷ್ಟು ಹಣ ಖರ್ಚು ಮಾಡಿ ಕಾವೇರಿ 5ನೇ ಹಂತ ಅನುಷ್ಠಾನ ಮಾಡಿದ್ದೇವೆ. ಆದರೆ ಅಪಾರ್ಟ್​ಮೆಂಟ್​ ನವರು ಬೇರೆ ರೂಪದಲ್ಲಿ ನೀರು ತೆಗೆದುಕೊಳ್ಳುತ್ತಿದ್ದಾರೆ. ಠೇವಣಿ ಕಟ್ಟಬೇಕು, ಸೇವಾ ಶುಲ್ಕು ಕಟ್ಟ ಬೇಕು ಅಂತ ಅಪಾರ್ಟ್​ಮೆಂಟ್​ ನವರು ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದಿದ್ದಾರೆ. ಇದನ್ನು ತಡೆಗಟ್ಟಲು ಸೂಚನೆ ನೀಡಲಾಗಿದೆ. ಪ್ರತಿಯೊಂದು ಮನೆ, ಅಪಾರ್ಟ್​ಮೆಂಟ್​ಗಳಿಗೆ ಹೋಗಿ ಕಾವೇರಿ ನೀರಿನ ಸಂಪರ್ಕ ತೆಗೆದುಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

 ಟನೆಲ್ ಯೋಜನೆ ಪೂರ್ಣಗೊಳಿಸಲು ಸೂಚನೆ:
ಫೆಬ್ರವರಿ ಅತ್ಯಂದ ವೇಳೆಗೆ ಸುರಂಗ ರಸ್ತೆ ನಿರ್ಮಾಣಕ್ಕಾಗಿ
17,780 ಕೋಟಿ ಮೊತ್ತದ ಟೆಂಡರ್ ಕರೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜೊತೆಗೆ ಮೂರುವರೆ ವರ್ಷಗಳ ಒಳಗಾಗಿ ಕಾಮಗಾರಿ ಮುಗಿಯಬೇಕು ಎಂದು ತಿಳಿಸಿದ್ದೇನೆ. ಎರಡು ಹಂತದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು. ಬಿಬಿಎಂಪಿಯಿಂದಲೂ ಹಣ ನೀಡಲಾಗುವುದು. ಸರ್ಕಾರದಿಂದಲೂ ಅನುದಾನ ನೀಡಲಾಗುವುದು. ಪವರ್ ಫೈನಾನ್ಸ್ ಕಾರ್ಪೋರೇಷನ್, ಹುಡ್ಕೋ ಸೇರಿದಂತೆ ಒಂದಷ್ಟು ಬ್ಯಾಂಕ್​ಗಳು ಸಾಲ ನೀಡಲು ಮುಂದೆ ಬಂದಿವೆ. ಇದಕ್ಕೂ ಹರಾಜು ಪ್ರಕ್ರಿಯೆ ಕರೆಯಲಾಗಿದೆ. ಯಾರು ಕಡಿಮೆ ಬಡ್ಡಿದರಕ್ಕೆ ಹಣ ನೀಡುತ್ತಾರೋ ಅವರಿಗೆ ಅವಕಾಶ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಡಿಸಿಎಂ ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಇ-ಖಾತಾ ಹೊಂದಿಲ್ಲದ ಆಸ್ತಿಗಳಿಗೆ ಬಿ ಖಾತೆ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಇಡೀ ದೇಶದಲ್ಲಿಯೇ ಇಲ್ಲದ ಕ್ರಾಂತಿಕಾರಕ ವ್ಯವಸ್ಥೆ ಬೆಂಗಳೂರಿನಲ್ಲಿ ಬರಲಿದೆ. ಮುಂದಿನ ವಾರದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಡಿಸಿಎಂ ಶಿವಕುಮಾರ್ ಹೇಳಿದರು.

 

 

- Advertisement -  - Advertisement -  - Advertisement - 
Share This Article
error: Content is protected !!
";