ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನಿಮ್ಮೆಲ್ಲರ ಆಶೀರ್ವಾದದಿಂದ ನಾನು ರಾಜ್ಯದ ಉಪ ಮುಖ್ಯಮಂತ್ರಿಯಾದರೆ ಸಂವಿಧಾನದ ಆಶಯದಂತೆ ಕೆಲಸ ಮಾಡುತ್ತೇನೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿ ಸಚಿವ ಬಿ.ಝಡ್.ಜಮೀರ್ ಅಹಮದ್‌ಖಾನ್ ಹೇಳಿದರು.
ಶುಕ್ರವಾರ ನಗರಕ್ಕೆ ಆಗಮಿಸಿದ್ದ ಅವರು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ ನಾನು ಮಂತ್ರಿಯಾಗಿದ್ದೇನೆಂದರೆ ಅದಕ್ಕೆ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕಾರಣ. ರಾಜ್ಯದಲ್ಲಿ ನನಗೆ ಉಪ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕರೆ ದಲಿತರು, ಶೋಷಿತರು, ಅಲ್ಪಸಂಖ್ಯಾತರು, ದಮನಿತರ ಪರವಾಗಿ ಕೆಲಸ ಮಾಡುತ್ತೇನೆ. ಸಂವಿಧಾನದ ಆಶಯದಂತೆ ಸರ್ವರಿಗೂ ಸಾಮಾಜಿಕ ನ್ಯಾಯ ಒದಗಿಸಬೇಕೆಂಬುದು ನನ್ನ ಬಯಕೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಎಂಎಸ್) ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಳೆಕಾಯಿ ಶ್ರೀನಿವಾಸ್ ಮಾತನಾಡಿ ಸಚಿವ ಬಿ.ಝಡ್. ಜಮೀರ್ ಅಹಮದ್‌ಖಾನ್‌ರವರು ಸರ್ವಧರ್ಮದ ನಾಯಕ. ಬಡವರು, ದಲಿತರು, ಶೋಷಿತರು, ಧ್ವನಿಯಿಲ್ಲದವರ ಬಗ್ಗೆ ಅಪಾರ ಕಾಳಜಿಯಿಟ್ಟುಕೊಂಡಿದ್ದಾರೆ. ೨೦೨೩ ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ೧೩೫ ಸೀಟುಗಳನ್ನು ಪಡೆದು ಅಧಿಕಾರಕ್ಕೆ ಬಂದಿದೆಯೆಂದರೆ ಅದಕ್ಕೆ ಮುಸ್ಲಿಂರು, ದಲಿತರು ಕಾರಣ ಎನ್ನುವುದನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮರೆಯಬಾರದು.
ನಿಜವಾಗಿಯೂ ಕಾಂಗ್ರೆಸ್ ನಾಯಕರುಗಳಿಗೆ ಬದ್ದತೆ, ಮುಸ್ಲಿಂರ ಬಗ್ಗೆ ಗೌರವವಿದ್ದರೆ ಸಚಿವ ಜಮೀರ್ ಅಹಮದ್‌ಖಾನ್‌ರವರನ್ನು ರಾಜ್ಯದ ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಇಲ್ಲವಾದಲ್ಲಿ ಬಸವಕಲ್ಯಾಣದಿಂದ ಬೆಂಗಳೂರುವರೆಗೆ ದಲಿತರು ಪಾದಯಾತ್ರೆ ಕೈಗೊಳ್ಳಬೇಕಾಗುತ್ತದೆಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಮುಸ್ಲಿಂರು, ದಲಿತರ ಮತಗಳನ್ನು ಪಡೆದು ಅಧಿಕಾರ ಅನುಭವಿಸಿಕೊಂಡು ಬರುತ್ತಿರುವ ಕಾಂಗ್ರೆಸ್ ಪಕ್ಷ ಅಧಿಕಾರ ನೀಡುವಲ್ಲಿ ಏಕೆ ಈ ಎರಡು ಜಾತಿಯವರನ್ನು ನಿರ್ಲಕ್ಷಿಸುತ್ತಿದೆಯೆಂದು ಪ್ರಶ್ನಿಸಿದ ಬಾಳೆಕಾಯಿ ಶ್ರೀನಿವಾಸ್ ಅಂಬೇಡ್ಕರ್‌ರವರ ಆಶಯದಂತೆ ಬಿ.ಝಡ್. ಜಮೀರ್ ಅಹಮದ್‌ಖಾನ್ ರಾಜ್ಯದ ಉಪ ಮುಖ್ಯಮಂತ್ರಿಯಾಗಬೇಕೆಂದು ನಮ್ಮ ಆಸೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ವಕ್ಫ್‌ಬೋರ್ಡ್ ಮಾಜಿ ಚೇರ್ಮನ್ ಎಂ.ಸಿ.ಒ.ಬಾಬು, ವಕ್ಫ್ ಮಂಡಳಿ ರಾಜ್ಯ ಸಮಿತಿ ಸದಸ್ಯ ಕೆ.ಅನ್ವರ್‌ಪಾಷ ಸೇರಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಹಲಿಂಗಪ್ಪ ಕುಂಚಿಗನಹಾಳ್, ಕೆ.ರಾಜಣ್ಣ, ಕಣುಮೇಶ್ ಜಾಲಿಕಟ್ಟೆ, ವೆಂಕಟೇಶ್ ಕವಾಡಿಗರಹಟ್ಟಿ ಹಾಗೂ ಅನೇಕ ದಲಿತ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಚಳ್ಳಕೆರೆ ಗೇಟ್‌ನಿಂದ ತೆರೆದ ವಾಹನದಲ್ಲಿ ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್‌ರನ್ನು ಮರೆವಣಿಗೆ ಮೂಲಕ ಕರೆತರಲಾಯಿತು.

