ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿಟ್ ಅಂಡ್ ರನ್ ನಾಯಕರ ಪಟ್ಟಿಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಸೇರುವುದು ಬೇಡ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಲಹೆ ನೀಡಿದರು.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಬಿಹಾರ ಚುನಾವಣೆಗೆ ಕರ್ನಾಟಕದಿಂದ ಹಣ ಹೋಗುತ್ತಿದೆ. ಇದಕ್ಕಾಗಿ ಅಧಿಕಾರಿಗಳಿಗೆ ಕಿರುಕುಳ ಹೆಚ್ಚಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಮಾಡಿರುವ ಗಂಭೀರ ಆರೋಪಕ್ಕೆ ಡಿಸಿಎಂ ಪ್ರತಿಕ್ರಿಯಿಸಿದ್ದಾರೆ.
ಅವರ ಬಳಿ ದಾಖಲೆಗಳಿದ್ದರೆ ಅದನ್ನು ಬಿಡುಗಡೆ ಮಾಡಿ ಆರೋಪ ಮಾಡಲಿ. ಹಿಟ್ ಅಂಡ್ ರನ್ ಮಾಡುವ ಒಂದಷ್ಟು ನಾಯಕರಿದ್ದಾರಲ್ಲಾ ಅವರಂತೆ ರಾಘವೇಂದ್ರ ಅವರು ಆಗುವುದು ಬೇಡ. ರಾಘವೇಂದ್ರ ಅವರ ಹೆಸರು ಸುಳ್ಳಿಗೆ ಮತ್ತೊಂದುಉದಾಹರಣೆಯಂತಾಗುವುದು ಬೇಡ ಎಂದು ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಂಸದ ಬಿ. ವೈ. ರಾಘವೇಂದ್ರ, ಬಿಹಾರ ಚುನಾವಣೆ ಹೆಸರಲ್ಲಿ ಅಧಿಕಾರಿಗಳಿಂದ ಸಚಿವರು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಸಚಿವ ಸಂಪುಟ ಸಚಿವರು ಬಿಹಾರದ ಚುನಾವಣೆಗೆ ಫಂಡ್ ಕಳುಹಿಸಬೇಕು ಎಂದು ಅಧಿಕಾರಿಗಳಿಂದ ಲೂಟಿ ಮಾಡುತ್ತಿದ್ದಾರೆ. ಸಚಿವರ ವಸೂಲಿಗೆ ಅಧಿಕಾರಿಗಳು ಕಣ್ಣೀರು ಹಾಕಿಕೊಂಡು ನಮ್ಮ ಎದುರಿಗೆ ಹೇಳುತ್ತಿದ್ದಾರೆ. ವರ್ಗಾವಣೆ ದಂಧೆ ಮುಗಿದಿದೆ.
ಈಗ ರಿನಿವಲ್ ಅಂತ ಎಲ್ಲಾ ಇಲಾಖೆಯ ಮಂತ್ರಿಗಳು ವಸೂಲಿ ಮಾಡಿ ಬಿಹಾರ್ ಚುನಾವಣೆಗೆ ಹಣ ಸಂಗ್ರಹ ಮಾಡುತ್ತಿದ್ದಾರೆ. ಈಗ ದಂಧೆ ಆಗಿದೆ. ಅದು ಬಿಹಾರಕ್ಕೆ ತಲುಪಲ್ಲ, ಅದು ಎಲ್ಲಿ ತಲುಪಬೇಕೋ ಅಲ್ಲಿಗೆ ತಲುಪುತ್ತದೆ. ಬಿಹಾರದ ಚುನಾವಣೆ ಇಟ್ಟುಕೊಂಡು ರಾಜ್ಯದಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ರಾಘವೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

