ಹಳದಿ ಲೈನ್ ಮೆಟ್ರೋಗೆ ಭೇಟಿ ನೀಡಿ ಪರಿಶೀಲಿಸಿದ ಡಿಸಿಎಂ ಡಿಕೆಶಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೆಟ್ರೋ
3ನೇ ಹಂತದ ಹಳದಿ ಮಾರ್ಗವು ಆರ್​.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸುಮಾರು 19.15 ಕಿಲೋ ಮೀಟರ್​ ಉದ್ದವಿದ್ದು, 16 ನಿಲ್ದಾಣಗಳಿವೆ.

ಹಳದಿ ಮಾರ್ಗ ಮೆಟ್ರೋ ಸಂಚಾರದಿಂದ ಸುಮಾರು 8 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

- Advertisement - 

ಸಿಲ್ಕ್ ಬೋರ್ಡ್ ಸೇರಿದಂತೆ ಹಲವಾರು ಭಾಗದಲ್ಲಿ ಸಂಚಾರ ದಟ್ಟಣೆಗೆ ಪರಿಹಾರವಾಗಲಿದೆ ಎಂದು ಡಿಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿ ಯೆಲ್ಲೋ ಲೈನ್​ನ ಚಾಲಕರಹಿತ ಮೆಟ್ರೋಗೆ ಚಾಲನೆ ನೀಡಲಿದ್ದಾರೆ.

- Advertisement - 

ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳವಾರ ಹಳದಿ ಲೈನ್ ಮೆಟ್ರೋಗೆ ಭೇಟಿ ನೀಡಿ ಡ್ರೈವರ್​​ಲೆಸ್ ಟ್ರೈನ್​ನಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು. ಕಾಮಗಾರಿ ಮತ್ತು ಸಿದ್ಧತೆ ಬಗ್ಗೆ ಬಿಎಂಆರ್​ಸಿಎಲ್ ಅಧಿಕಾರಿಗಳು ಡಿಸಿಎಂಗೆ ಮಾಹಿತಿ ನೀಡಿದರು.

ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸುವ ವಿಚಾರವಾಗಿ ಮಾತನಾಡುವ ಸಂದರ್ಭ ಕೇಳಲಾದ ಪ್ರಶ್ನೆಗೆ ಸಿಡಿಮಿಡಿಗೊಂಡ ಡಿಕೆ ಶಿವಕುಮಾರ್, ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾ ಎಂದು ಗರಂ ಆದರು. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮ. ಕಾರ್ಯಕ್ರಮಕ್ಕೆ ಆಹ್ವಾನಿಸಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದೇವು.

ಪ್ರಧಾನಿ ಕಚೇರಿಯಿಂದ ಆಗಸ್ಟ್ 10ಕ್ಕೆ ಸಮಯ ಕೊಟ್ಟಿದ್ದಾರೆ. ಹಾಗಾಗಿ ಆ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ರಾಜಕಾರಣ‌ ಮಾಡುವಂತಹದ್ದು ಏನಿಲ್ಲ. ಅಭಿವೃದ್ಧಿ ಮುಖ್ಯ, ಈ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಶಿವಕುಮಾರ್ ಹೇಳಿದರು.

ಮುಂದಿನ ಎಲ್ಲ ನಮ್ಮ ಮೆಟ್ರೋ ಕಾಮಗಾರಿಗಳು ಡಬಲ್​ ಡೆಕ್ಕರ್ ಆಗಬೇಕೆಂಬ ನಾನೇ ಸೂಚಿಸಿದ್ದೇನೆ. ಯಾಕೆಂದರೆ, ಹಾಗೆ ಮಾಡಿದಾಗ ಮತ್ತೊಂದು ಹೊಸ ರಸ್ತೆ ನಿರ್ಮಾಣ ಆದಂತೆ ಆಗುತ್ತದೆ. ಸ್ವಲ್ಪ ದುಡ್ಡಿನ ಸಮಸ್ಯೆ ಇದೆ, ಆದರೂ ಡಬಲ್ ಡಕ್ಕರ್ ಕಾಮಗಾರಿ ಮಾಡಬೇಕು.

ಈಗ ಮಾತಾಡುವ ಬಿಜೆಪಿ ಸಂಸದರೆಲ್ಲಾ ಮೋದಿ ಬಳಿ ಹಣ ಕೊಡಿಸಲಿ. ಬಿಬಿಎಂಪಿ ಮತ್ತು ಬಿಡಿಎ ಎಲ್ಲಾ ಸೇರಿ ಡಬಲ್​ ಡೆಕ್ಕರ್ ಮಾಡುತ್ತೇವೆ. ಮೆಟ್ರೋ ಕಾಮಗಾರಿ ಡಬಲ್​ ಡೆಕ್ಕರ್ ಬಗ್ಗೆ ಯೋಜನೆ ರೂಪಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಆರ್​​ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಸಿದ್ಧತೆ ಪರಿಶೀಲನೆಗೆ ತೆರಳಿದ ಡಿಕೆ ಶಿವಕುಮಾರ್​​ಗೆ ಶಾಸಕರಾದ ಹ್ಯಾರಿಸ್, ರಾಮಮೂರ್ತಿ, ಎಂ.ಕೃಷ್ಣಪ್ಪ, ಸತೀಶ್ ರೆಡ್ಡಿ ಸಾಥ್ ನೀಡಿದರು.

 

Share This Article
error: Content is protected !!
";