ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ತಾಲೂಕಿನ ವಾಣಿ ವಿಲಾಸ ಜಲಾಶಯದಿಂದ ಜವನಗೊಂಡನಹಳ್ಳಿ ಹೋಬಳಿಯ 06 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 100 ಹಳ್ಳಿಗೆ ಯಾವ ಮೂಲದಿಂದ ನೀರು ಕಲ್ಪಿಸಬಹುದು ಎಂದು ಇನ್ನೊಂದು ವಾರದೊಳಗೆ ಕ್ರಮ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೂಚಿಸಿದರು.
ವಿಧಾನ ಸೌಧ ಮೂರನೇ ಮಹಡಿಯಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಹೊಸದುರ್ಗ ಶಾಸಕ ಬಿಜಿ ಗೋವಿಂದಪ್ಪ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹಾಗೂ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರು ಮಾಹಿತಿ ನೀಡಿದರು.
ಅಂತರ್ಜಲ ಮಟ್ಟ ಹೆಚ್ಚಿಸಲು ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಕುದಿಯುವ ನೀರು ಪೂರೈಸಲು ಮುಂದಾಗಿದ್ದು ಅದರಂತೆ ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡುತ್ತಿದ್ದೇನೆ. ಅಧಿಕಾರಿಗಳು ಇನ್ನೊಂದು ವಾರದಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಮಾತನಾಡಿ ಜವಗೊಂಡನಹಳ್ಳಿ ಹೋಬಳಿಯಲ್ಲಿ ಕುಡಿಯುವ ನೀರಿನ ಅಭಾವವಿದೆ. ಕುಡಿಯುವ ನೀರು ಪೂರೈಸಲು ಟ್ಯಾಕ್ಟರ್ ಮೂಲಕ ನೀರು ಸರಬರಾಜ ಮಾಡಲಾಗುತ್ತಿದೆ ಎಂದು ಫೋಟೋ ವಿಡಿಯೋಗಳನ್ನು ಉಪಮುಖ್ಯಮಂತ್ರಿಗಳಿಗೆ ತೋರಿಸಿ ವಸ್ತು ಸ್ಥಿತಿ ಬಗ್ಗೆ ಮನವಿ ಮಾಡಿ ತಾಲೂಕಿನ ವಾಣಿವಿಲಾಸ ಜಲಾಶಯದಿಂದ ಜವನಗೊಂಡನಹಳ್ಳಿ ಹೋಬಳಿಯ ನೂರು ಗ್ರಾಮಗಳಿಗೆ 0.50 ಟಿಎಂಸಿ ನೀರು ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉಪ ಮುಖ್ಯಮಂತ್ರಿಗಳು ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ವಾಣಿ ವಿಲಾಸ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಪ್ರದೇಶಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಯಿತು.
ಮುಳುಗಡೆಯಾಗಿ ತೊಂದರೆಯಾಗುತ್ತಿರುವ ಮನೆಗಳು, ಜಮೀನು, ಬೆಳೆಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಲಾಗಿದೆ.
ಮುಳುಗಡೆ ತಡೆಗಟ್ಟುವ ಸಂಬಂಧದ ಪ್ರಾಜೆಕ್ಟ್ ಅನ್ನು ದೆಹಲಿ ಸಿಡಬ್ಲ್ಯೂಸಿ ಅಪ್ರೂವಲ್ ಗೆ ಕಳುಹಿಸಿದ್ದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಚಿವ ಹೆಚ್. ಕೆ ಪಾಟೀಲ್, ಶಿವರಾಜ್ ತಂಗಡಗಿ, ಹೊಸದುರ್ಗ ಶಾಸಕ ಬಿಜಿ ಗೋವಿಂದಪ್ಪ, ಚಳ್ಳಕೆರೆ ಟಿ. ರಘುಮೂರ್ತಿ, ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹಾಗೂ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹಾಜರಿದ್ದರು.

