ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯುಕೆಪಿ ಹಂತ ಮೂರು ಯೋಜನೆ ಜಾರಿಗೆ ಮಹಾರಾಷ್ಟ್ರ, ಆಂಧ್ರ ಅಡ್ಡಗಾಲು ಹಾಕಿದರೂ ಯೋಜನೆ ಪೂರ್ಣಗೊಳಿಸಲು ನಾವು ಬದ್ಧ ಎಂದು ಜಲಸಂಪನ್ಮೂಲ ಇಲಾಖೆ ಸಚಿವ, ಡಿಸಿಎಂ ಡಿ.ಕೆ ಶಿವಕುಮಾರ್ ಭರವಸೆ ನೀಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆ (ಹಂತ-3) ಸಂಬಂಧ ಭೂಸ್ವಾಧೀನ ಪರಿಹಾರ ಸೇರಿದಂತೆ ಇತರೇ ವಿಚಾರಗಳ ಬಗ್ಗೆ ವಿಧಾನಸಭೆಯಲ್ಲಿ ಶಾಸಕರಾದ ಬಸನಗೌಡ ಪಾಟೀಲ್‌ಯತ್ನಾಳ ಅವರ ಪ್ರಶ್ನೆಗೆ ಡಿಸಿಎಂ ಅವರು ಉತ್ತರಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಸಿದ್ದರಾಮಯ್ಯ ಅವರು ಹಾಗೂ ನಾವು ಚರ್ಚೆ ಮಾಡಿ ಭೂ ಪರಿಹಾರದ ಬಗ್ಗೆ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದೇವೆ.
ಈ ಯೋಜನೆ ಪೂರ್ಣಗೊಳಿಸಲು ನಾವು ಬದ್ದವಾಗಿದ್ದೇವೆ. ವರ್ಷಕ್ಕೆ 15-20 ಸಾವಿರ ಕೋಟಿ ನೀಡಬೇಕು, ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಭೂಸ್ವಾಧೀನ ಪೂರ್ಣಗೊಳಿಸಬೇಕು ಎಂದು ಹೊರಟಿದ್ದೇವೆ. ಕೆಲವು ಕಡೆ ಕೆಲಸವನ್ನೂ ಪ್ರಾರಂಭ ಮಾಡಿದ್ದೇವೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.

