ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಡಿಎ ಸಿಬ್ಬಂದಿ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಾಕೀತು ಮಾಡಿದ್ದಾರೆ.
ಬೆಂಗಳೂರಿನ ಅಂಬೇಡ್ಕರ್ವೀದಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಆಡಳಿತ ಸುಧಾರಣೆಗಳು ಹಾಗೂ ಸಾರ್ವಜನಿಕ ಅಹವಾಲು ನಿರ್ವಹಣೆ ವಿಷಯಗಳ ಕುರಿತು ಬಿಡಿಎ ನೌಕರರಿಗೆ ತರಬೇತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಡಿಎ ತಮ್ಮ ಸಿಬ್ಬಂದಿಗೆ 7 ದಿನಗಳ ಈ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವುದು, ಪರಿಣಾಮಕಾರಿಯಾಗಿ ಕುಂದುಕೊರತೆಗಳ ನಿರ್ವಹಣೆ, ಸಾರ್ವಜನಿಕರಿಗೆ ಅನುಕೂಲವಾಗುವ ಪ್ರಕ್ರಿಯೆಗಳ ಸರಳೀಕರಣ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಹೆಚ್ಚು ನೊಂದವರೇ ಬರುತ್ತಾರೆ, ಹೀಗಾಗಿ ಬಿಡಿಎ ಸಿಬ್ಬಂದಿ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಬೇಕು.
ಎಲ್ಲರನ್ನೂ ಗೌರವದಿಂದ ಕಾಣಬೇಕು ಹಾಗೂ ಏಜೆಂಟ್ ಗಳ ಅವ್ಯವಹಾರಗಳಿಗೆ ಅವಕಾಶ ಕೊಡದೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಬಿಡಿಎ ಸಿಬ್ಬಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಲಹೆಗಳನ್ನು ನೀಡಿದರು. ಬಿಡಿಎ ಅಧ್ಯಕ್ಷ ಎನ್.ಎ ಹ್ಯಾರಿಸ್ಸೇರಿದಂತೆ ಬಿಡಿಎ ಅಧಿಕಾರಿಗಳು ಇದ್ದರು.

