ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2027ಕ್ಕೆ ಕೋಲಾರಕ್ಕೆ ಎತ್ತಿನಹೊಳೆ ನೀರು ಹರಿಸುವುದು, ಇದು ಸರ್ಕಾರದ ಬದ್ಧತೆಯ ಗುರಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಮಾಧ್ಯಮದವರಿಗೆ ಅವರು ಮಾಹಿತಿ ನೀಡಿ ಮಾತನಾಡಿದರು.
ಎತ್ತಿನಹೊಳೆ ಯೋಜನೆಯನ್ನು 2027ರ ಮಾರ್ಚ್ ಒಳಗಾಗಿ ಪೂರ್ಣಗೊಳಿಸಿ, ಬಯಲು ಸೀಮೆಯ 7 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದು. ಇದು ಸರ್ಕಾರದ ಸಂಕಲ್ಪ. ಅರಣ್ಯ ಇಲಾಖೆ ಜೊತೆ ಬೈರಗೊಂಡಲು, ಲಕ್ಕೇನಹಳ್ಳಿ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಏನು ಸಮಸ್ಯೆ ಇದೆ ಎಂಬುದನ್ನು ಸುದೀರ್ಘವಾಗಿ ಚರ್ಚಿಸಿದ್ದೇವೆ ಎಂದು ಜಲಸಂಪನ್ಮೂಲ ಸಚಿವರು, ಡಿಸಿಎಂ ಡಿಕೆಶಿ ತಿಳಿಸಿದರು.
ತುಮಕೂರಿನಲ್ಲಿ ಕಾರ್ಯಕ್ರಮ ಮುಗಿಸಿ, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಪ್ರಮುಖ ಸ್ಥಳಗಳಲ್ಲಿ ಭೇಟಿ ನೀಡಿ, ಕಣ್ಣಾರೆ ಅಲ್ಲಿನ ಪರಿಸ್ಥಿತಿ ವೀಕ್ಷಿಸಿ, ವರದಿ ಸಿದ್ಧಪಡಿಸುತ್ತೇನೆ. ಅದನ್ನು ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಎತ್ತಿನಹೊಳೆ ಯೋಜನೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.

