ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಅನುಮತಿ ಮತ್ತು ಅನುದಾನ ನೀಡಿ-ಡಿಸಿಎಂ ಶಿವಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಪಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವರಾದ ಸಿ.ಆರ್ ಪಾಟೀಲ್ ಮತ್ತು ಕೇಂದ್ರದ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ನೆನೆಗುದಿಗೆ ಬಿದ್ದಿರುವ ರಾಜ್ಯದ ಹಲವು ನೀರಾವರಿ ಯೋಜನೆಗಳಿಗೆ ಅನುಮತಿ ಹಾಗೂ ಅನುದಾನ ನೀಡಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿಲಾಯಿತು.

ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಅನುಷ್ಠಾನಕ್ಕೆ ತರಲಾಗದೇ ನೆನೆಗುದಿಗೆ ಬಿದ್ದಿರುವ ಮೇಕೆದಾಟು, ಮಹದಾಯಿ, ಭದ್ರಾ ಮೇಲ್ದಂಡೆ ಯೋಜನೆಗಳೂ ಸೇರಿದಂತೆ ಹಲವಾರು ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಒಪ್ಪಿಗೆ ನೀಡುವಂತೆ ಜಲಸಂಪನ್ಮೂಲ ಸಚಿವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಜಲಶಕ್ತಿ ಸಚಿವರಲ್ಲಿ ಹಕ್ಕೊತ್ತಾಯ ಮಂಡಿಸಿದರು.
ಜಲಶಕ್ತಿ ಸಚಿವಾಲಯಕ್ಕೆ ಡಿಕೆ ಶಿವಕುಮಾರ್ ಆರು ಹೊಸ ಪ್ರಸ್ತಾವನೆಗಳಿಗೆ ಪಿಎಂಕೆಎಸ್ವೈ-ಎಐಬಿಪಿ ಮತ್ತು ಎಫ್ಎಂಬಿಎಪಿ ಅಡಿಯಲ್ಲಿ ಅಂದಾಜು ರೂ. 11123 ಕೋಟಿ ರೂ.ಗಳ ಕೇಂದ್ರ ಸಹಾಯಧನವನ್ನು ಕೋರಿದರು. ಕೇಂದ್ರ ಸರ್ಕಾರದಿಂದ ಬಾಕಿ ಉಳಿದಿರುವ ಯೋಜನೆಗಳಿಗೆ ಅನುಮತಿ ನೀಡಲು ಒತ್ತಾಯಿಸಿದರು.

ಎಫ್ಎಂಬಿಎಪಿ ಅಡಿ ಪ್ರವಾಹ ನಿರ್ವಹಣೆ ಮತ್ತು ಗಡಿ ಪ್ರದೇಶ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಧಾರವಾಡ ಜಿಲ್ಲೆಯ ಬೆಣ್ಣೆಹಳ್ಳ ಪ್ರವಾಹ ಸಂರಕ್ಷಣಾ ಕಾಮಗಾರಿಗೆ 1610 ಕೋಟಿ ರೂ. ನೀಡಲು ಮನವಿ ಸಲ್ಲಿಸಿದರು. ಅಲ್ಲದೆ ಪಿಎಂಕೆಎಸ್‌ವೈ-ಎಐಬಿಪಿ ಯೋಜನೆಯಡಿ ಐದು ಪ್ರಸ್ತಾವನೆಗಳಿಗೆ 9,512 ಕೋಟಿ ಕೇಂದ್ರದ ನೆರವು ನೀಡುವಂತೆ ಕೋರಿದರು.

ಐದು ಪ್ರಸ್ತಾವನೆಗಳ ಪೈಕಿ ಒಂದರಲ್ಲಿ 16,000 ಹೆಕ್ಟೇರ್‌ಗಳಷ್ಟು ಭೀಮಾ ನದಿಯಿಂದ ನೀರಾವರಿ ಸೌಲಭ್ಯ ನೀಡಲು ಕಲ್ಬುರ್ಗಿ ಜಿಲ್ಲೆ ಚಿತಾಪುರ ಮತ್ತು ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿಗೆ ನೀರು ನೀಡಲಾಗುತ್ತದೆ. ಉಳಿದ 4 ಪ್ರಸ್ತಾವನೆಗಳು ಮಲಪ್ರಭಾ ಕಾಲುವೆಗಳ ವಿಸ್ತರಣೆ, ನವೀಕರಣ ಮತ್ತು ಆಧುನೀಕರಣ ಕಾಮಗಾರಿಗಳು, ಯುಕೆಪಿ ಅಡಿಯಲ್ಲಿ ಇಂಡಿ ಶಾಖಾ ಕಾಲುವೆ, ಘಟಪ್ರಭಾ ಬಲದಂಡೆ ಕಾಲುವೆ ಮತ್ತು ಚಿಕ್ಕೋಡಿ ಶಾಖಾ ಕಾಲುವೆ ಮತ್ತು ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣ ಮಾಡಲಾಗುತ್ತದೆ. ಇದರಿಂದ ವಿಜಯಪುರ, ಧಾರವಾಡ, ಬೆಳಗಾವಿ, ಬಾಗಲಕೋಟ, ಗದಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದು ಡಿಸಿಎಂ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಮೇಕೆದಾಟು ಬ್ಯಾಲೆನ್ಸಿಂಗ್ ರಿಸರ್ವಾಯರ್-ಕಮ್-ಕುಡಿಯುವ ನೀರಿನ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೇಂದ್ರ ನೆರವು, ಕಳಸಾ ಮತ್ತು ಭಂಡೂರ ನಾಲಾ ಯೋಜನೆಗಳಿಗೆ ತೆರವು – ಮಹದಾಯಿ, ಮಹಾನದಿ-ಗೋದಾವರಿ ಜಲಾನಯನ ಪ್ರದೇಶಗಳಿಂದ ಹೆಚ್ಚುವರಿ ನೀರನ್ನು ಕೃಷ್ಣಾ – ಕಾವೇರಿ ಮತ್ತು ಪೆನ್ನಾರ್ / ಪಾಲಾರ್ ಜಲಾನಯನ ಪ್ರದೇಶಗಳಿಗೆ ತಿರುಗಿಸುವ ನೀರಿನ ಯೋಜನೆಗಳಿಗೆ ಅನುಮತಿ ನೀಡುವಂತೆ ಸಚಿವರು ಕೋರಿದರು.

 ಡಿಸಿಎಂ ಡಿಕೆ ಶಿವಕುಮಾರ್ ಅವರು ಆರು ಹೊಸ ಪ್ರಸ್ತಾವನೆಗಳನ್ನು ಕೇಂದ್ರ ಸಚಿವರಿಗೆ ಸಲ್ಲಿಸಿದರು. ಅಣೆಕಟ್ಟುಗಳು ಮತ್ತು ಕಾಲುವೆ ಯಾಂತ್ರೀಕರಣಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಪರಿಗಣಿಸಬೇಕು ಎಂದು ತಿಳಿಸಿದರು. ಇದರಿಂದ ಸಮರ್ಥವಾಗಿ ನೀರಾವರಿ ನಿರ್ವಹಣೆ, ನೀರಿನ ಬಳಕೆಯಲ್ಲಿ ದಕ್ಷತೆ, ಸುಧಾರಣೆ ಮತ್ತು ಸಮಾನ ನೀರು ವಿತರಣೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಯುಕೆಪಿ ಅಡಿಯಲ್ಲಿ ಕೈಗೆತ್ತಿಕೊಂಡ ಕೆನಾಲ್ ಆಟೊಮೇಷನ್‌ನ ಯಶಸ್ವಿ ಅನುಷ್ಠಾನ ನೆನಪಿಸಿಕೊಂಡರು. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಕೇಂದ್ರದ ಸಹಾಯಧನಕ್ಕಾಗಿ ಮನವಿ ಸಲ್ಲಿಸಿದರು.

ಮೇಕೆದಾಟು ಯೋಜನೆ: ಕೇಂದ್ರ ಜಲಶಕ್ತಿ ಸಚಿವರ ಭೇಟಿ ಸಂದರ್ಭದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸಮತೋಲನ ಜಲಾಶಯ ನಿರ್ಮಿಸುವ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ನೀಡಬೇಕು. ಇದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗಲಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೇಂದ್ರ ಸಚಿವರಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ.

ಮೇಕೆದಾಟು ಯೋಜನೆಯು ರಾಮನಗರ ಜಿಲ್ಲೆಯ ಕನಕಪುರ ಬಳಿ ಕಾವೇರಿ ನದಿಗೆ ಸಮತೋಲನ ಜಲಾಶಯ ನಿರ್ಮಿಸುವುದಾಗಿದೆ. ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದಿಸುವ ಉದ್ದೇಶ ಹೊಂದಲಾಗಿದೆ. ಮೇಕೆದಾಟು ಜಲಾಶಯದಲ್ಲಿ ಸುಮಾರು 67 ಟಿಎಂಸಿ ನೀರು ಸಂಗ್ರಹಿಸಿ ಬೆಂಗಳೂರು ನಗರಕ್ಕೆ 4.75 ಟಿಎಂಸಿ ಯಷ್ಟು ಕುಡಿಯುವ ನೀರು ಸರಬರಾಜು ಮಾಡುವ ಯೋಚನೆ ಇದಾಗಿದೆ. ಹಾಗೆಯೇ ಮಳೆಗಾಲದಲ್ಲಿ ಕಾವೇರಿ ಜಲಾಶಯ ತುಂಬಿ ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವ ನೀರನ್ನು ಮೇಕೆದಾಟು ಜಲಾಶಯದಲ್ಲಿ ಸಂಗ್ರಹಿಸಿ ಸಂಕಷ್ಟ ಕಾಲದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡಲೂ ಈ ಯೋಜನೆ ಸಹಕಾರಿ ಆಗಲಿದೆ ಎಂದು ಸಚಿವರು ವಿವರಿಸಿದರು.
12 ಸಾವಿರ ಎಕರೆ ಭೂಮಿ ಮೇಕೆದಾಟು ಯೋಜನೆಗೆ ಅಗತ್ಯವಾಗಿದ್ದು 9 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಸರಕಾರವು ಈಗಾಗಲೇ ವಿವರವಾದ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ಭದ್ರಾ ಮೇಲ್ದಂಡೆಗೆ ಅನುದಾನ:
ಕೇಂದ್ರ ಸರ್ಕಾರ ತನ್ನ ಬಜೆಟ್​​ನಲ್ಲಿ ಘೋಷಣೆ ಮಾಡಿದಂತೆ ಭದ್ರಾ ಮೇಲ್ದಂಡೆ ಯೋಜನೆಗೆ
5300 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಜಲಶಕ್ತಿ ಸಚಿವರ ಗಮನ ಸೆಳೆದರು. ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳಾದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿನ 2,25,515 ಹೆಕ್ಟೇರ್ ಭೂ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ಧತಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವುದು, 367 ಕೆರೆಗಳಿಗೆ ಶೇ. 50ರಷ್ಟು ನೀರನ್ನು ತುಂಬಿಸಿ ಅಂತರ್ಜಲ ವೃದ್ಧಿಸುವ ಉದ್ದೇಶ ಹೊಂದಲಾಗಿದೆ. ಹಾಗಾಗಿ ಈ ಯೋಜನೆಗೆ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಡಿ.ಕೆ ಶಿವಕುಮಾರ್ ಒತ್ತಾಯಿಸಿದರು.

 ಮಹದಾಯಿ ಯೋಜನೆ: ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳು ಸೇರಿದಂತೆ ಉತ್ತರ ಕರ್ನಾಟಕದ ಹಲವು ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಕುಡಿಯುವ ಸರಬರಾಜು ಮಾಡುವ ಉದ್ದೇಶದ ಮಹದಾಯಿ ಯೋಜನೆಗೂ ಅನುಮತಿ ನೀಡಬೇಕು. ಆದರೆ ಈ ಯೋಜನೆಗೆ ಕೇಂದ್ರದ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಲು ನಿರಾಕರಿಸಿದ್ದು ಪುನರ್ ಪರಿಶೀಲಿಸಿ ಒಪ್ಪಿಗೆ ನೀಡಬೇಕು ಎಂದು ಕೋರಿಕೊಂಡರು.

ರಾಜ್ಯದ ಸಣ್ಣ ನೀರಾವರಿ ಸಚಿವ ಬೋಸರಾಜ್, ರಾಜ್ಯ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

 

 

Share This Article
error: Content is protected !!
";