ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಬೆಂಗಳೂರಿನಲ್ಲಿ ಒತ್ತುವರಿಯಾಗಿರುವ ರಾಜಕಾಲುವೆ, ಚರಂಡಿ ಇತರೆ ನೀರಿನ ರಾಜ ಮಾರ್ಗಗಳ ತೆರವು ಕಾರ್ಯ ಮಾಡಲಾಗುತ್ತದೆ. ಮಳೆ ನೀರು ಸರಾಗವಾಗಿ ಹರಿಯಲು ಅಡ್ಡ ಇರುವ ಕಟ್ಟಡಗಳನ್ನು ವಿಪತ್ತು ನಿರ್ವಹಣೆ ಕಾಯ್ದೆ ಅಡಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.
ಯಲಹಂಕದ ಮಾನ್ಯತಾ ಟೆಕ್ ಪಾರ್ಕ್ ಬಳಿ ಮಳೆ ಪ್ರವಾಹಕ್ಕೆ ಕಾರಣವಾದ ರಾಜಕಾಲುವೆ ಹಾಗೂ ನಾಲೆಗಳನ್ನು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಗುರುವಾರ ಪರಿಶೀಲಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಿದರು.
ನಾನು ಹಾಗೂ ಮುಖ್ಯಮಂತ್ರಿಗಳು ಈಗಾಗಲೇ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಇದು ಬಹಳ ಮುಖ್ಯವಾದ ಜಂಕ್ಷನ್. ಇಲ್ಲಿಂದ ಸಮಸ್ಯೆ ಆರಂಭವಾಗಿ ನಂತರ ಉಳಿದ ಪ್ರದೇಶಗಳಲ್ಲಿ ಸಮಸ್ಯೆಯಾಗುತ್ತಿದೆ. ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಅಡ್ಡಿಪಡಿಸುತ್ತಿದ್ದಾರೆ. ನಮ್ಮ ಅಧಿಕಾರಿಗಳಿಗೂ ಸಹಕಾರ ನೀಡುತ್ತಿರಲಿಲ್ಲ. ಹೀಗಾಗಿ ಸಮಸ್ಯೆಗೆ ಕಾರಣವಾಗಿರುವ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕಟ್ಟಡ ತೆರವುಗೊಳಿಸಲು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ತಿಳಿಸಿದರು.
ಸಮಸ್ಯೆಗೆ ಶಾಶ್ವತ ಪರಿಹಾರ:
ಸರ್ಕಾರಕ್ಕೆ ಯಾರ ಆಸ್ತಿ ನಷ್ಟ ಮಾಡಲು ಇಷ್ಟವಿಲ್ಲ. ಯಾರಿಗೂ ಅನ್ಯಾಯ ಮಾಡಲು ಬಯಸುವುದಿಲ್ಲ. ಮಳೆ ನೀರು ಸರಾಗವಾಗಿ ಹರಿಯಬೇಕು. ಹೀಗಾಗಿ ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕಾಮಗಾರಿ ಮುಂದುವರಿಸಲು ನನ್ನ ಮುಂದೆ ಎಲ್ಲರೂ ಒಪ್ಪಿಕೊಂಡಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವುದು ಮುಖ್ಯ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗದಂತೆ ಸರಾಗವಾಗಿ ಹರಿಯುವುದು ಮುಖ್ಯವೇ ಹೊರತು ಇನ್ಯಾರೂ ಅಲ್ಲ. ನಾವು ಯಾವುದೇ ಕಟ್ಟಡಗಳಿಗೆ ಅಡಚಣೆ ಮಾಡಲು ಬಯಸುವುದಿಲ್ಲ. ಬೆಂಗಳೂರಿನ ಘನತೆ ಹಾಳಾಗಲು ಬಿಡುವುದಿಲ್ಲ. ಹೀಗಾಗಿ, ಈ ಭಾಗದ ಭೂಮಾಲೀಕರಿಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದೇವೆ. ತಾಂತ್ರಿಕ ಕಾರಣಗಳಿಂದಾಗಿ ತಪ್ಪಾಗಿದ್ದರೆ, ನಾವು ಅದಕ್ಕೆ ಪರಿಹಾರ ನೀಡುತ್ತೇವೆ. ನಮಗೆ ಈ ವಿಚಾರವಾಗಿ ಶಾಶ್ವತ ಪರಿಹಾರ ಬೇಕಾಗಿದೆ. ಇದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದು, ನಾವು ನಮ್ಮ ಕೆಲಸ ಮುಂದುವರಿಸುತ್ತೇವೆ. ಪಾಲಿಕೆ ಆಯುಕ್ತರು ಹಾಗೂ ಕಾರ್ಯದರ್ಶಿಗಳಿಗೆ ಈ ವಿಚಾರದಲ್ಲಿ ಇರುವ ಅಡಚಣೆಗಳನ್ನು ತೆರವುಗೊಳಿಸಲು ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಡಿಸಿಎಂ ಅವರು ತಿಳಿಸಿದರು.
ಕಸದ ಸೆಸ್ ಕಡಿಮೆ ಮಾಡಬೇಕು ಎಂಬ ಬಿಜೆಪಿ ಆಗ್ರಹದ ಬಗ್ಗೆ ಕೇಳಿದಾಗ, ಅವರ ಕಾಲದಲ್ಲಿ ತೆಗೆದುಕೊಂಡ ತೀರ್ಮಾನವನ್ನು ನಾವು ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ. ಅವರು ಏನು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಪರಿಶೀಲಿಸಿ ನಂತರ ಅವರೊಂದಿಗೆ ಮಾತನಾಡುತ್ತೇನೆ. ಅವರ ಅಭಿಪ್ರಾಯಕ್ಕೂ ಗೌರವ ನೀಡುತ್ತೇನೆ ಎಂದು ಉಪಮುಖ್ಯಮಂತ್ರಿ ಶಿವಕುಮಾರ್ ಹೇಳಿದರು.