ಸತೀಶ್ ಜಾರಕಿಹೊಳಿ ಅವರನ್ನು ದಿಢೀರ್ ಭೇಟಿ ಮಾಡಿದ ಡಿಸಿಎಂ ಶಿವಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್​​ ನೇತೃತ್ವದ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ವಿಚಾರ ದಿನದಿಂದ ದಿನಕ್ಕೆ ಕಾವು ಏರಿಕೆಯಾಗುತ್ತಿರುವುದು ಒಂದು ಕಡೆಯಾದರೆ, ಸಿಎಂ ಸಿದ್ದರಾಮಯ್ಯ ಆಪ್ತ ಬಳಗದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದಿಢೀರ್ ಭೇಟಿಯಾಗಿ ಮಾತುಕತೆ ನಡೆಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ಸಂದರ್ಭದಲ್ಲಿ ನಡೆದ ಮಾತುಕತೆ ವಿಚಾರವನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿ ಮಾಹಿತಿ ನೀಡಿದ್ದಾರೆ.

- Advertisement - 

ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡಬೇಕು. ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಆಗಿದೆ. ಪಕ್ಷ ಸಂಘಟನೆ, ಮುಂದಿನ ಚುನಾವಣೆ ಬಗ್ಗೆ ಚರ್ಚೆ ಆಗಿದೆ. ಹೈಕಮಾಂಡ್ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳಲಿದೆ. ಪಕ್ಷ ಹೇಳಿದಂತೆ ನಾವು ಕೇಳುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಹೈಕಮಾಂಡ್ ತೀರ್ಮಾನ:
ಡಿಕೆ ಶಿವಕುಮಾರ್​ ಅವರಿಗೂ ಸಿಎಂ ಆಗುವ ಆಸೆ ಇದೆ. ಸಿದ್ದರಾಮಯ್ಯ ಸಿಎಂ ಎಂದು ಹೈಕಮಾಂಡ್ ತೀರ್ಮಾನಿಸಿದೆ. ಇದು ಗೊಂದಲದ ಸಮಯವಾಗಿದ್ದು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಲು ಸಮಯ ಕೇಳುತ್ತೇನೆ. ಸಮಯ ಸಿಕ್ಕರೆ ನನ್ನ ಅಭಿಪ್ರಾಯ ಹೇಳುತ್ತೇನೆ. ಸಹಜವಾಗಿ ಡಿಕೆಶಿ ನನ್ನ ಭೇಟಿ ಮಾಡಿದ್ದಾರೆ. ಕೆಲವರನ್ನು ಮನೆಗೆ ಕರೆಸಿ ಭೇಟಿ ಆಗಿದ್ದಾರೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

- Advertisement - 

ಡಿಕೆ ಶಿವಕುಮಾರ್ ಎಲ್ಲಾ ಸಚಿವರು, ಶಾಸಕರನ್ನು ಭೇಟಿಯಾಗಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಬಹುಶಃ ಕೊನೆಯವನು ನಾನೇ ಇರಬೇಕು. ಸಾಕಷ್ಟು ಬಾರಿ ಡಿಕೆಶಿವಕುಮಾರ್​ ಅವರು ನನ್ನನ್ನು ಭೇಟಿಯಾಗಿದ್ದಾರೆ. ಈ ಹಿಂದೆ ಮಾಜಿ ಸಂಸದ ಡಿ.ಕೆ.ಸುರೇಶ್ ಸಹ ಭೇಟಿಯಾಗಿದ್ದರು. ನಾವು ಕೂಡ ಡಿಕೆ ನಿವಾಸಕ್ಕೆ ಹೋಗಿ ಬಂದಿದ್ದೇವೆ ಎಂದು ಸಚಿವರು ತಿಳಿಸಿದರು.

ಅಧಿಕಾರ ಹಂಚಿಕೆ: ಡಿಕೆ ಶಿವಕುಮಾರ್ ಅವರು ಅಧಿಕಾರ ಹಂಚಿಕೆ ಕುರಿತು ಎಲ್ಲ ನಾಯಕರ ಬಳಿ ಪ್ರಸ್ತಾಪ ಮಾಡುತ್ತಿದ್ದಾರೆ. ತಮ್ಮನ್ನು ಸೇರಿದಂತೆ ಭೇಟಿಯಾದ ಎಲ್ಲ ನಾಯಕರ ಬಳಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಧಿಕಾರ ಹಂಚಿಕೆ ಬಗ್ಗೆ ಮಾತುಕತೆ ನಡೆದಿತ್ತು. ಆ ಮಾತುಕತೆ ನಡೆದಾಗ ದೆಹಲಿಯಲ್ಲಿ 6 ಮಂದಿ ನಾಯಕರು ಉಪಸ್ಥಿತರಿದ್ದರು. ಹೀಗಾಗಿ ಅದನ್ನೇ ನಂಬಿ ಇಷ್ಟುದಿನ ಸುಮ್ಮನಿದ್ದೆ ಎಂದು ಡಿಕೆ ಶಿವಕುಮಾರ್ ಹೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂದು ಮಾತುಕತೆಯಾಗಿದ್ದರೂ ಈವರೆಗೆ ಅಧಿಕಾರ ಹಂಚಿಕೆ ವಿಚಾರ ಮುನ್ನೆಲೆಗೆ ಬಾರದ ಹಿನ್ನೆಲೆ ಆ ಬಗ್ಗೆ ಚರ್ಚಿಸುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಜತೆ ಸಿಎಂ ಹಾಗೂ ಡಿಸಿಎಂ ಮಾತುಕತೆ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ವಿಚಾರ ಚರ್ಚೆಯಾಗಿತ್ತು. ಆ ಸಂದರ್ಭದಲ್ಲಿ ಡಿಕೆ ಸುರೇಶ್ ಕೂಡ ಹಾಜರಿದ್ದರು ಎಂದು ತಮ್ಮನ್ನು ಭೇಟಿಯಾದ ಎಲ್ಲ ನಾಯಕರ ಬಳಿ ಡಿಕೆ ಶಿವಕುಮಾರ್ ಹೇಳುತ್ತಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತಿದೆ.

 

Share This Article
error: Content is protected !!
";