ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಂಡ ಕಂಡವರ ನಟ್ಟು ಬೋಲ್ಟು ಟೈಟು ಮಾಡುವುದರಲ್ಲೇ ಬ್ಯುಸಿ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ಠುಸ್ ಪಟಾಕಿ ಆಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ದೇವರೇ ಬಂದರೂ ಬೆಂಗಳೂರಿನ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕೂತಿರುವ ಡಿಸಿಎಂ ಸಾಹೇಬರ ಕಾರ್ಯವೈಖರಿಯಿಂದ ಕಳೆದ ವರ್ಷದ ಬಜೆಟ್ ನಲ್ಲಿ ಬೆಂಗಳೂರಿಗೆ ಘೋಷಣೆಯಾದ ಯೋಜನೆಗಳು ಘೋಷಣೆಗಳಾಗಿಯೇ ಉಳಿದಿವೆ.
ಸ್ವಚ್ಛ ಬೆಂಗಳೂರು – 100 ಕೋಟಿ, ಘನತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ವಹಣೆಗೆ 1000 ಕೋಟಿ, ಪೌರಕಾರ್ಮಿಕರಿಗೆ ಶರಣೆ ಸತ್ಯಕ್ಕ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ವಿತರಣೆ, ಆರೋಗ್ಯಕರ ಬೆಂಗಳೂರು – 100 ಕೋಟಿ, ಪ್ರತ್ಯೇಕ ಆರೋಗ್ಯ ಆಯುಕ್ತಾಲಯ, ಆರೋಗ್ಯ ಸಾರಥಿ, ಮನೋಬಿಂಬ ಸಂವಾದ ಯೂಟ್ಯೂಬ್, ಸದೃಢ ಆರೋಗ್ಯ, ಟೆಕ್ ಬೆಂಗಳೂರು, 50 ಹೊಸ ಇಂದಿರಾ ಕ್ಯಾಂಟೀನ್ ಇವು ಡಿಕೆ ಶಿವಕುಮಾರ್ ಅವರ ಘೋಷಣೆಗಳಾಗಿದ್ದು ಘೋಷಣೆಯಾಗಿಯೇ ಉಳಿದಿವೆ ಎಂದು ಅಶೋಕ್ ತರಾಟೆ ತೆಗೆದುಕೊಂಡಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ, ನಿಮಗೆ ಕೆಲಸ ಮಾಡಲು ಆಸಕ್ತಿ ಇದ್ದರೆ, ಪುರುಸೊತ್ತಿದ್ದರೆ ಬೆಂಗಳೂರು ಅಭಿವೃದ್ದಿ ಖಾತೆ ಇಟ್ಟುಕೊಳ್ಳಿ. ಇಲ್ಲವಾದರೆ ದಯವಿಟ್ಟು ಈ ಖಾತೆಯನ್ನು ಯಾರಾದರೂ ಸಮರ್ಥರಿಗೆ, ಆಸಕ್ತಿ ಇದ್ದವರಿಗೆ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ವಿಪಕ್ಷ ನಾಯಕರು ತಾಕೀತು ಮಾಡಿದ್ದಾರೆ.
ಕಳೆದ 20 ತಿಂಗಳಲ್ಲಿ ಬೆಂಗಳೂರಿಗೆ ನಿಮ್ಮ ಕೊಡುಗೆ ಏನು ಡಿ.ಕೆ.ಶಿವಕುಮಾರ್ ಅವರೇ? ನಿಮ್ಮ ಸಾಧನೆ ಏನು? ಕೆಲಸ ಮಾತಾಡಬೇಕು. ಬರೀ ಮಾತೇ ಕೆಲಸವಾಗಬಾರದು ಎಂದು ಅಶೋಕ್ ಎಚ್ಚರಿಸಿದ್ದಾರೆ.

