ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ ಜಿಲ್ಲೆ):
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ನರಸಿಂಹ ಸಮೇತ ಘಾಟಿಸುಬ್ರಹ್ಮಣ್ಯ ಕ್ಷೇತ್ರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಪತ್ನಿಯೊಂದಿಗೆ ಕುಟುಂಬ ಸಮೇತನಾಗಿ ಭೇಟಿ ನೀಡಿ, ನಾಡಿನ ಸಮಸ್ತ ಜನತೆಗೆ ಒಳಿತಾಗಲೆಂದು ಪ್ರಾರ್ಥನೆ ಸಲ್ಲಿಸಿದರು.
ಭಗವಂತ ಹಾಗೂ ಭಕ್ತನ ನಡುವೆ ಸಂಬಂಧ ಬೆಸೆಯುವ ಸ್ಥಳವೇ ದೇವಾಲಯ. ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಐತಿಹ್ಯವನ್ನು ಮನದಲ್ಲಿಟ್ಟುಕೊಂಡು, ಪವಿತ್ರ ಯಾತ್ರಾ ಸ್ಥಳವಾಗಿ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರದಿಂದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಡಿಸಿಎಂ ಭರವಸೆ ನೀಡಿದರು.
ದೇವರ ದರ್ಶನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತಿಹಾಸವಿರುವ ಘಾಟಿ ಸುಬ್ರಹ್ಮಣ್ಯ ಬಹಳ ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರ. ನನ್ನ ಕಷ್ಟದ ದಿನಗಳಲ್ಲಿ ಸ್ನೇಹಿತರು ಸುಬ್ರಹ್ಮಣ್ಯಸ್ವಾಮಿಗೆ ಪ್ರಾರ್ಥನೆ ಮಾಡಿದ್ದು, ಫಲ ಸಿಕ್ಕಿದೆ. ಬಹಳ ದಿನಗಳಿಂದ ಇಲ್ಲಿಗೆ ಬರಬೇಕೆಂದುಕೊಂಡಿದ್ದೆ.
ಆದರೆ ಸಾಧ್ಯವಾಗಿರಲಿಲ್ಲ. ಇವತ್ತು ಬಂದೇ ಬರಬೇಕೆಂದು ತೀರ್ಮಾನಿಸಿದೆ. ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಕ್ಕೆ ಬಹಳ ಸಂತೋಷವಾಗಿದೆ ಎಂದರಲ್ಲದೆ ದೇವಸ್ಥಾನದ ಸನ್ನಿಧಿಯಲ್ಲಿ ಯಾವುದೇ ರಾಜಕಾರಣಮಾತನಾಡುವುದಿಲ್ಲ ಎಂದು ಡಿಸಿಎಂ ತಿಳಿಸಿದರು.
“ಸಚಿವರಾದ ಕೆ.ಎಚ್.ಮುನಿಯಪ್ಪ, ರಾಮಲಿಂಗಾರೆಡ್ಡಿ ಅವರು ಸೇರಿದಂತೆ ಸರ್ಕಾರ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಿದ್ದಾರೆ. ಶ್ರೀ ಕ್ಷೇತ್ರ ದೊಡ್ಡ ಯಾತ್ರಿಕ ಸ್ಥಳವಾಗಲಿದೆ. ದೇವರು ಮತ್ತು ಭಕ್ತನ ನಡುವೆ ವ್ಯವಹಾರ ನಡೆಯುವ ಸ್ಥಳ ದೇವಾಲಯ. ನಾನೂ ಸಹ 30 ವರ್ಷಗಳ ಹಿಂದೆ ಕುಟುಂಬ ಸಮೇತನಾಗಿ ಬಂದು ಸರ್ಪ ಸಂಸ್ಕಾರ ಸೇವೆ ಮಾಡಿದ್ದೆ. ಕ್ಷೇತ್ರದೊಂದಿಗೆ ಸಂಬಂಧವನ್ನು ಇಟ್ಟುಕೊಂಡಿದ್ದೇನೆ ಎಂದು ಡಿಸಿಎಂ ಡಿಕೆಶಿ ಅವರು ಹೇಳಿದರು.
ಜಾತಿ ಗಣತಿ ವರದಿ ಬಹಿರಂಗ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಇನ್ನೂ ಕ್ಯಾಬಿನೆಟ್ನಲ್ಲಿ ಚರ್ಚೆ ಆಗಬೇಕು. ಸಿಎಂ ಸದನದಲ್ಲಿ ಚರ್ಚೆ ಮಾಡುತ್ತೀವಿ ಅಂತಾ ಹೇಳಿದ್ದಾರೆ. ಆತುರದ ನಿರ್ಧಾರವನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಕೆಲವು ರಾಜಕಾರಣಿಗಳು ಹೇಳಿಕೆ ಕೊಡಬೇಕು, ಕೊಡ್ತಾರೆ. ಸತ್ಯಾಂಶ ತಿಳಿದುಕೊಂಡು ಎಲ್ಲರಿಗೂ ನ್ಯಾಯ ಒದಗಿಸಿಕೊಡುವ ಕೆಲಸ ಮಾಡ್ತೇವೆ ಎಂದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು, ಮಾಜಿ ಶಾಸಕರಾದ ವೆಂಕಟರಮಣಯ್ಯ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರಾಜಣ್ಣ, ಉಪ ವಿಭಾಗಾಧಿಕಾರಿ ದುರ್ಗಶ್ರೀ, ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ್, ಇಒ ಮುನಿರಾಜು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.