ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಒಂದೇ ದಿನದಲ್ಲಿ ಮೇಕೆದಾಟು ಅಣೆಕಟ್ಟಿಗೆ ಅನುಮತಿ ಕೊಡಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರಲ್ಲ, ಮೊದಲು ಆ ಕೆಲಸ ಮಾಡಲಿ, ಆಮೇಲೆ ಮಾತಾಡಲಿ ಅವರು ಅಧಿಕಾರದಲ್ಲಿ ಇದ್ದಾಗ ಎರಡನೇ ವಿಮಾನ ನಿಲ್ದಾಣ ಮಾಡಲು ಯಾವುದೇ ಹೆಜ್ಜೆ ಇಡಲಿಲ್ಲ. ನಾವು ಈಗ ಹೆಜ್ಜೆ ಇಟ್ಟಿದ್ದೇವೆ ಎಂದು ದೇವೇಗೌಡರು 2ನೇ ವಿಮಾನ ನಿಲ್ದಾಣಕ್ಕೆ ಸದನದಲ್ಲಿ ಕೋರಿದ್ದಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಡಿಸಿಎಂ ಅವರ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣವನ್ನು ಎಲ್ಲಿ, ಯಾವ ಜಾಗದಲ್ಲಿ ಮಾಡಬೇಕು ಎನ್ನುವುದು ನಮ್ಮ ವ್ಯಾಪ್ತಿಯಲ್ಲಿಲ್ಲ. ಬಿಡದಿ, ನೆಲಮಂಗಲ, ತುಮಕೂರು, ಸೋಲೂರು ಹೀಗೆ ಯಾವ ಸ್ಥಳದಲ್ಲಿ ಬರಬೇಕು ಎಂಬುದನ್ನು ತೀರ್ಮಾನ ಮಾಡುವುದು ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರು ಎಂದು ಡಿಸಿಎಂ ಹೇಳಿದರು.
ಆದರೆ 2ನೇ ವಿಮಾನ ನಿಲ್ದಾಣವನ್ನು ಇಂತಿಷ್ಟು ವರ್ಷಗಳ ಕಾಲ ನಿರ್ಮಾಣ ಮಾಡಬಾರದು ಎನ್ನುವ ಒಪ್ಪಂದವಿದೆ. ಇದನ್ನು ಆ ಎರಡು ಸಂಸ್ಥೆಗಳು ತೀರ್ಮಾನ ಮಾಡುತ್ತವೆ ಎಂದು ತಿಳಿಸಿದರು.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಯುತ್ತಿದೆ. ಅವರು ಮುಖ್ಯಮಂತ್ರಿಗಳು ಹಾಗೂ ನನ್ನ ಬಳಿ ಮಾತನಾಡಿ ಆ ನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಪ್ರಾಧಿಕಾರದ ಅನುಮತಿ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಿವಕುಮಾರ್ ಹೇಳಿದರು.
ನಮ್ಮ ಊರಿನಲ್ಲೇ ವಿಮಾನ ನಿಲ್ದಾಣ ಆಗಬೇಕೆನ್ನುವ ಆಸೆ ಇದೆ. ಆದರೆ ಆ ರೀತಿ ಮಾಡಲು ಆಗುವುದಿಲ್ಲ. ವಿಮಾನ ನಿಲ್ದಾಣ ನಿರ್ಮಾಣ ಆಗಬೇಕು ಎಂದರೆ ಸಾಕಷ್ಟು ರೀತಿ, ರಿವಾಜುಗಳಿವೆ. ಗುಡ್ಡಗಳು ಇರಬಾರದು, ಫ್ಲೈಯಿಂಗ್ ಜೋನ್ ಇರಬೇಕು. ಹೀಗೆ ಸಾಕಷ್ಟು ನಿಯಮಗಳಿವೆ. ಅಲ್ಲದೇ ಒಟ್ಟು 4,400 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.